Literary ಸಾಹಿತಿ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಅವರು ರಚಿಸಿದ ಕೃತಿಗಳನ್ನು ಮುಂಡರಗಿಯ ಜಗದ್ಗುರು ತೋಂಟದಾರ್ಯ ಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹುಬ್ಬಳ್ಳಿಯಲ್ಲಿ ಬಿಡುಗಡೆಗೊಳಿಸಿದರು.  
ಧಾರವಾಡ

ಸಾಹಿತಿ ಪಟ್ಟಣಶೆಟ್ಟಿ ಅವರದ್ದು ಬಸವತತ್ವ ನಿಷ್ಠ ಬದುಕು Literary

ಪ್ರಮುಖ ಮುಖ್ಯಾಂಶಗಳು

  • ಕನ್ನಡದ ಚರಿತ್ರೆ ತಿಳಿಯಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ
  • ವೈಚಾರಿಕ ಮನಸ್ಸು ದೇಶ, ಸಮಾಜ, ಧರ್ಮ ವಿರೋಧಿ ಅಲ್ಲ.
  • ಎಡಬಲ ಪರವಾದಿಗಳಲ್ಲ, ಬದಲಾಗಿ ಮನುಷ್ಯರ ಹೃದಯಪರವಾದಿಗಳು.
ಹುಬ್ಬಳ್ಳಿ :Literary
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಅವರ ಕುಟುಂಬದವರು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಹಿತಿ ಪ್ರೊ. ಎಸ್.ವಿ.ಪಟ್ಟಣಶೆಟ್ಟಿ ಅವರ 83ನೇ ಜನ್ಮದಿನ ಹಾಗೂ ಅವರು ರಚಿಸಿದ ಮೂರು ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶರಣರ ಬದುಕು ನಿಷ್ಠುರತೆ ಹಾಗೂ ಸತ್ಯ ದಾರಿಯದ್ದಾಗಿದೆ. ಪಟ್ಟಣಶೆಟ್ಟಿ ಅವರು ರಚಿಸಿರುವ ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ ಕೃತಿ ಕನ್ನಡದ ಚರಿತ್ರೆ ತಿಳಿಯಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಮುಂಡರಗಿಯ ಜಗದ್ಗುರು ತೋಂಟದಾರ್ಯ ಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ವಚನ ಸುಧೆ, ತುಪ್ಪದ ತಲೆಯವರು, ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ ಕೃತಿಗಳನ್ನು ಬಿಡುಗಡೆಗೊಳಿಸಿದರು.
ನಂತರ ಆಶೀರ್ವಚನ ನೀಡಿದ ಶ್ರೀಗಳು, ವೈಚಾರಿಕ ಮನಸ್ಸು ದೇಶ, ಸಮಾಜ, ಧರ್ಮ ವಿರೋಧಿ ಅಲ್ಲ. ಭ್ರಮೆ ಮತ್ತು ಅಜ್ಞಾನದಲ್ಲಿ ಬದುಕುವವರಿಗೆ ವೈಚಾರಿಕತೆ ರುಚಿಸುವುದಿಲ್ಲ. ಅಂತಹ ಅಜ್ಞಾನದ ಬಗ್ಗೆ ಎಚ್ಚರಿಸಿ ಸರಿದಾರಿಗೆ ತರುವ ಕಾರ್ಯವನ್ನು ಪಟ್ಟಣಶೆಟ್ಟಿ ಅವರು ತಮ್ಮ ಸಾಹಿತ್ಯ ಕೃಷಿಯ ಮೂಲಕ ಮಾಡಿದ್ದಾರೆ ಎಂದು ಹೇಳಿದರು. ನಾವು ಎಡಬಲ ಪರವಾದಿಗಳಲ್ಲ, ಬದಲಾಗಿ ಮನುಷ್ಯರ ಹೃದಯಪರವಾದಿಗಳು. ಬದುಕು ಅನುಭವಿಸಿ ಸಾವು ಪ್ರೀತಿಸುವವರು. ದೇಶದಲ್ಲಿ ಪರತಂತ್ರ ತಲೆಯ ಸ್ಥಿತಿ ಹೆಚ್ಚುತ್ತಿದೆ. ಬಸವಣ್ಣ ಹಾಗೂ ಶರಣರ ಚಿಂತನೆ, ತತ್ವಗಳ ಬದುಕಿನಿಂದ ದೂರ ಸರಿದ ಲಿಂಗಾಯತರು ಹೋಮಹವನಕ್ಕೆ ಸಿಲುಕಿ ಆತ್ಮವಂಚನೆಗೆ ಇಳಿದಿದ್ದಾರೆ ಎಂದರು.
ಸಾಹಿತಿ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಮಾತನಾಡಿ, ನನ್ನ ಬರವಣಿಗೆಗೆ ಬಸವಣ್ಣ ಹಾಗೂ ಶರಣರು ಪ್ರೇರಕಶಕ್ತಿಯಾಗಿದ್ದಾರೆ. ಬಸವ ಕೇಂದ್ರ ನನ್ನ ಸಾಹಿತ್ಯ ಕೃಷಿಗೆ ಪ್ರೇರಣೆ ನೀಡುವ ಮೂಲಕ ನನ್ನನ್ನು ಬೆಳೆಸಿದೆ, ಬೆಳಗಿಸಿದೆ ಎಂದು ತಿಳಿಸಿದರು.
ನನ್ನ ಕೃತಿ ತುಪ್ಪದ ತಲೆಯವರು ಎಂದರೆ ಅಪಾರ್ಥ ಬೇಡ. ದುಡಿಯದಲೇ ದುಡಿದವರ ಬೆವರಿನಲ್ಲಿ ತುಪ್ಪ ತಿನ್ನುವವರು ಎಂದರ್ಥ ಎಂದರು.
ವಚನ ಸುಧೆ ಕುರಿತಾಗಿ ಲೆಕ್ಕಪರಿಶೋಧಕ ನಟರಾಜ ಮೂರಶಿಳ್ಳಿ, ತುಪ್ಪದ ತಲೆಯವರು ಕುರಿತಾಗಿ ಪತ್ರಕರ್ತ ಮಲ್ಲಿಕಾರ್ಜುನ ಸಿದ್ಧಣ್ಣವರ ಮಾತನಾಡಿದರು.
ಪಟ್ಟಣಶೆಟ್ಟಿ ಅವರ ಪುತ್ರಿ ಡಾ. ಪೂರ್ಣಿಮಾ ಮಾತನಾಡಿ, ತಂದೆಯವರಲ್ಲಿ ಜಾತಿ, ಅಸಮಾನತೆ, ಮೂಢನಂಬಿಕೆಗಳ ಬಗ್ಗೆ ಕಿಚ್ಚು ಮೊದಲಿನಿಂದಲೂ ಇತ್ತು. ನಮ್ಮ ತಂದೆಯೇ ನಮಗೆ ದೊಡ್ಡ ಆಸ್ತಿ ಹಾಗೂ ಸ್ಪೂರ್ತಿ, ಮೌಲ್ಯದ ಮೂಲಕ ಸಾಹಿತ್ಯ ರಚನೆ ಅವರದ್ದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿದರು. ಮಾಜಿ ಸಂಸದ ಐ.ಜಿ.ಸನದಿ, ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಎಂ.ವಿ. ಗೊಂಗಡಶೆಟ್ಟಿ, ಕಸಾಪ ಗೌರವ ಕಾರ್ಯದರ್ಶಿ ಪ್ರೊ. ದಾಸೋಹಿಗಳಾದ ಶಂಕರ ಕೋಳಿವಾಡ, ದಾಕ್ಷಾಯಣಿ ಕೋಳಿವಾಡ, ರತ್ನಮ್ಮ ಪೂಜಾರ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಬ್ಯಾಂಕ್ ಅಧಿಕಾರಿ ಜೆ.ಎಸ್. ಪ್ರಸನ್ನಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆ.ಎಸ್.ಕೌಜಲಗಿ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ, ಐಟಿ ತಜ್ಙ ಪ್ರಭುದೇವ ಬಗಲಿ ಹಾಗೂ ಪಟ್ಟಣಶೆಟ್ಟಿ ಕುಟುಂಬದವರು ಇದ್ದರು.
ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ ಸ್ವಾಗತಿಸಿದರು. ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ನಿರೂಪಿಸಿದರು.