ಉಪ್ಪಿನಬೆಟಗೇರಿ ಗ್ರಾಮದ ಜಗದ್ಗುರು ಮೂರುಸಾವಿರ ವಿರಕ್ತಮಠದಲ್ಲಿ ಸೋಮವಾರ ಕುಮಾರ ವಿರೂಪಾಕ್ಷ ಸ್ವಾಮೀಜಿಗಳು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಎಸ್.ಕೆ. ಕೊಡಿ, ಎನ್.ಸಿ. ಬೆಣ್ಣಿ, ಕಲಾವತಿ ಸಿದ್ದಾಪೂರ, ರೂಪಾ ಮಡಿವಾಳರ, ದೀಪಾ ವಾಲಿ ಇತರರಿದ್ದರು. 
ಧಾರವಾಡ

ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನ ಅವಶ್ಯಕ

ಮಂಜುನಾಥ ಗದಗಿನ
ಉಪ್ಪಿನಬೆಟಗೇರಿ: ಅಕ್ಷರಾಭ್ಯಾಸ ಎಂದರೆ ಜ್ಞಾನದ ಮೊದಲ ಹೆಜ್ಜೆಯಾಗಿದ್ದು, ನಾವು ಮೊದಲ ಬಾರಿಗೆ ಅಕ್ಷರಗಳನ್ನು ಬರೆಯುವ ಮೂಲಕ ವಿದ್ಯಾದೇವತೆಯಾದ ಸರಸ್ವತಿ ಮಾತೆಯ ಆಶೀರ್ವಾದ ಪಡೆಯುತ್ತೇವೆ ಎಂದು ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ಅವರು ಗ್ರಾಮದ ಶ್ರೀ ಕುಮಾರೇಶ್ವರ ಶಿಕ್ಷಣ ಸಂಸ್ಥೆಯ ಶಾಲೆಯ ಮಕ್ಕಳಿಗೆ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ಅಕ್ಷರವು ಕೇವಲ ಬರವಣಿಗೆಯಲ್ಲ, ಅದು ನಮ್ಮ ಬದುಕಿಗೆ ಬೆಳಕು ನೀಡುವ ಜ್ಞಾನದ ದೀಪವಾಗಿದೆ. ಚಿಕ್ಕಂದಿನಿಂದ ಕಲಿಯುವ ಅಕ್ಷರದ ಬರವಣಿಗೆ ಜೀವನ ರೂಪಿಸಿಕೊಳ್ಳುವ ಭದ್ರ ಬುನಾದಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಅಕ್ಷರದ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರು.
ಶಿಕ್ಷಕ ಎಸ್.ಕೆ. ಕೊಡಿ ಮಾತನಾಡಿ, ಮನೆಯಲ್ಲಿ ತಂದೆ-ತಾಯಿ ಕೂಡ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ನೀಡುವುದ ಜತೆಗೆ, ಹೃದಯವಂತರನ್ನಾಗಿ ಮಾಡಬೇಕು. ಮಕ್ಕಳು ಉತ್ತಮ ಓದು ಬರಹ ಬಲ್ಲವರಾಗಲು ಕೇವಲ ಶಿಕ್ಷಕರಿಂದ ಸಾಧ್ಯವಿಲ್ಲ. ಮನೆಯಲ್ಲಿ ಪಾಲಕರೂ ಅವರಿಗೆ ಒಳ್ಳೆಯ ನಡೆ-ನುಡಿ ಆಚಾರ-ವಿಚಾರ, ಧಾರ್ಮಿಕತೆಯ ತಿಳಿವಳಿಕೆಯ ಅರಿವು ಮೂಡಿಸಬೇಕು ಎಂದು ಹೇಳಿದರು.
ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಸರಸ್ವತಿ ಪೂಜೆಯೊಂದಿಗೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿರೂಪಾಕ್ಷ ಸ್ವಾಮೀಜಿಗಳು ಅಕ್ಷರಾಭ್ಯಾಸ ಮಾಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಎಸ್.ಕೆ. ಕೊಡಿ, ಎನ್.ಸಿ. ಬೆಣ್ಣಿ, ಕಲಾವತಿ ಸಿದ್ದಾಪೂರ, ರೂಪಾ ಮಡಿವಾಳರ, ದೀಪಾ ವಾಲಿ, ಮಂಜುಳಾ ಮಡಿವಾಳರ, ಆರ್.ವಿ. ದೊಡವಾಡ ಇತರರಿದ್ದರು.