bjp ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆ ಪತ್ರ ಪ್ರದರ್ಶಿಸಿದ ಲಿಂಗರಾಜ ಪಾಟೀಲ. 
ಧಾರವಾಡ

bjp ಬಿಜೆಪಿ ಶಿಸ್ತು ಸಮಿತಿಗೆ ಲಿಂಪಾ ರಾಜೀನಾಮೆ

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ಎಂಎಲ್ಸಿ ಟಿಕೆಟ್​ಗೆ ಪರಿಗಣಿಸಲು 8 ದಿನ ಗಡವು
  • 37 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದೇನೆ.
  • ನಿಷ್ಠಾವಂತ ಕಾರ್ಯಕರ್ತನಾದ ನಾನು ಪಕ್ಷಕ್ಕೆ ಬೇಡವಾಗಿದ್ದೇನೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಗದ್ಗದಿತರಾದ ಅವರು, ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಗೆ ಪತ್ರ ರವಾನಿಸಿದ್ದಾಗಿ ತಿಳಿಸಿದರು.
ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಅವಧಿ ಇನ್ನೂ ಮುಗಿದಿಲ್ಲ. ಕಳೆದ 6 ವರ್ಷಗಳಿಂದ ಈ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತನಾದ ನಾನು ಪಕ್ಷಕ್ಕೆ ಬೇಡವಾಗಿದ್ದೇನೆ ಎಂದು ಕಣ್ಣೀರು ಹಾಕಿದರು.
37 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದೇನೆ. ಬೂತ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ.
ಬಿಜೆಪಿಗೆ ಅಸ್ತಿತ್ವವೇ ಇಲ್ಲದ ಸಮಯದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ.
ನನಗೆ ಚುನಾವಣೆ ಟಿಕೆಟ್ ಕೊಟ್ಟರೆ ಈ ಭಾಗದಲ್ಲಿ ಮತ್ತೊಬ್ಬ ನಾಯಕ ಬೆಳೆಯುತ್ತಾನೆಂಬ ಕಾರಣದಿಂದ ಟಿಕೆಟ್ ತಪ್ಪಿಸಿದ್ದಾರೆ. ಪಕ್ಷದ ಮುಖಂಡರ ಈ ಮನೋಸ್ಥಿತಿಯಿಂದಾಗಿ ರಾಜ್ಯದಲ್ಲಿ ಬಿಜೆಪಿ ಬೆಳೆಯುತ್ತಿಲ್ಲ ಎಂದು ಆರೋಪಿಸಿದರು.
ಈಗಲೂ ಸಮಯ ಮೀರಿಲ್ಲ. ಪಕ್ಷದ ಮುಖಂಡರು ಎಸ್. ವಿ. ಸಂಕನೂರ ಅವರಿಗೆ ನೀಡಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಟಿಕೆಟ್​ಅನ್ನು 8 ದಿನದೊಳಗೆ ಬದಲಾಯಿಸಿ, ನನಗೆ ನೀಡಬೇಕು. ಇಲ್ಲದಿದ್ದರೆ 8 ದಿನಗಳ ನಂತರ ನಿರ್ಧಾರ ಹೇಳುತ್ತೇನೆ.
ಇದು ಬ್ಲಾಕ್​ವೆುೕಲ್ ಅಲ್ಲ. ನಾನು ಬಿಜೆಪಿ ತ್ಯಜಿಸಿ, ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ ಎಂದು ಹೇಳಿದರು.
ಅಧಿಕಾರದಲ್ಲಿ ಇರುವವರು ನಾನು ಮಾಡಿದ ಕೆಲಸ ಮರೆತಿದ್ದಾರೆ. ಆರಂಭದಲ್ಲಿ ಹುಬ್ಬಳ್ಳಿಗೆ ಯಾವುದೇ ಮುಖಂಡರು ಬಂದರೂ ನನ್ನ ಬಳಿ ಇರುವ ಕಾರುಗಳನ್ನು ಕಳುಹಿಸುತ್ತಿದ್ದೆ.
ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಓಡಾಡುತ್ತಿದ್ದೆ. ನನಗೆ ಟಿಕೆಟ್ ನೀಡದೇ ಇದ್ದರೆ ನಾನು ಪ್ರಾಮಾಣಿಕವಾಗಿ ಇಷ್ಟು ವರ್ಷ ಮಾಡಿರುವ ಕೆಲಸಕ್ಕೆ ತೋರಿದ ಅಗೌರವವೆಂದು ಭಾವಿಸುತ್ತೇನೆ ಎಂದರು.
ಈ ಹಿಂದೆ ಎರಡು ಬಾರಿ ಲೋಕಸಭೆ ಚುನಾವಣೆ ಟಿಕೆಟ್ ತಪ್ಪಿತು. ಆದರೂ ಮೌನವಾಗಿದ್ದೆ. ಎರಡು ಬಾರಿ ವಿಧಾನ ಪರಿಷತ್ ಸದಸ್ಯನಾಗುವ ಅವಕಾಶವೂ ತಪ್ಪಿದೆ. ಕಳೆದ ವರ್ಷ ಎಂಎಲ್​ಸಿ ಅವಕಾಶ ಬಂದಿತ್ತು. ಮೊಳೆ ಎಂಬ ಮರಾಠಾ ಸಮಾಜದವರಿಗೆ ಆಗ ಟಿಕೆಟ್ ಕೊಟ್ಟರು ಎಂದು ತಿಳಿಸಿದರು.
ಎಸ್. ವಿ. ಸಂಕನೂರ ಅವರು ಕಳೆದ ಬಾರಿಯೇ ತಮ್ಮ ಕೊನೆಯ ಚುನಾವಣೆಯೆಂದು ಹೇಳಿದ್ದರು. ಆದರೂ, ಈ ಬಾರಿ ಮತ್ತೆ ಆಕಾಂಕ್ಷಿಯಾಗಿದ್ದರು. ಸಂಕನೂರ ಅವರು ಎಂಎಲ್​ಸಿ ಆಗಿದ್ದರೂ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ.
ಹೀಗಾಗಿ, ಅವರಿಗೆ ಟಿಕೆಟ್ ನೀಡದಂತೆ ಎಲ್ಲ ಆಕಾಂಕ್ಷಿಗಳು ಪಕ್ಷದ ಹೈಕಮಾಂಡ್ ಅನ್ನು ಒತ್ತಾಯಿಸಿದ್ದರು ಎಂದು ಹೇಳಿದರು.
ಈ ಬಾರಿ ನನಗೇ ಟಿಕೆಟ್ ಖಚಿತವೆಂದು ಪಕ್ಷದ ಎಲ್ಲ ಮುಖಂಡರು ಹೇಳುತ್ತಿದ್ದರು. ಕೋರ್ ಕಮಿಟಿಯಲ್ಲಿಯೂ ನನ್ನ ಹೆಸರು ಟಿಕೆಟ್​ಗಾಗಿ ಅಂತಿಮಗೊಂಡಿತ್ತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಸಹ ಈ ಬಾರಿ ಲಿಂಗರಾಜ ಪಾಟೀಲ ಅವರಿಗೆ ಟಿಕೆಟ್ ಖಚಿತವೆಂದು ಹೇಳಿದ್ದರು. ಆದರೂ, ಕೊನೇ ಘಳಿಗೆಯಲ್ಲಿ ಮತ್ತೊಮ್ಮೆ ನನಗೆ ಟಿಕೆಟ್ ನೀಡದೇ ವಂಚಿಸಲಾಗಿದೆ ಎಂದು ಕಣ್ಣೀರು ಹಾಕಿದರು.
ನಾನು ಟಿಕೆಟ್​ಗಾಗಿ ಭಿಕ್ಷೆ ಬೇಡುವವನಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಕೊಡದೇ ವಲಸಿಗರು, ಬ್ಲಾಕ್ ಮೇಲ್ ಮಾಡುವವರು ಹಾಗೂ ಆರೋಪ ಹೊತ್ತವರಿಗೆ ಪಕ್ಷದಲ್ಲಿ ಮನ್ನಣೆ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಂಎಲ್​ಸಿ ಚುನಾವಣೆ ಟಿಕೆಟ್ ತಪ್ಪಿದ್ದರೂ ಈವರೆಗೆ ಯಾವುದೇ ಮುಖಂಡರು ನನಗೆ ಪೋನ್ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಯಲ್ಲಿ ಎಸ್. ವಿ. ಸಂಕನೂರ ಬಿಜೆಪಿ ವಿರುದ್ಧ ಸ್ಪರ್ಧಿಸಿದ್ದರು. ಮೋಹನ ಲಿಂಬಿಕಾಯಿ ಬಿಜೆಪಿಯಿಂದ ಎಂಎಲ್​ಸಿ ಆಗಿ, ಅಧಿಕಾರ ಅನುಭವಿಸಿ, ಪಕ್ಷ ತ್ಯಜಿಸಿದರು. ಇಂತಹವರಿಗೇ ಇಲ್ಲಿ ಮನ್ನಣೆ ಸಿಗುತ್ತದೆ ಎಂದು ಬೇಸರ ಹೊರಹಾಕಿದರು.