ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ಶ್ರೀ ಅಡವಿ ಸಿದ್ಧೇಶ್ವರ ಮಠದ ಆವರಣದಲ್ಲಿ (shivalingeshwara swamiji) ಲಿಂ. ಶಿವಲಿಂಗೇಶ್ವರ ಸ್ವಾಮೀಜಿ ಪ್ರಥಮ ಪುಣ್ಯ ಸ್ಮರಣೋತ್ಸವ ಸೋಮವಾರ ಜರುಗಿತು.
ಹುಬ್ಬಳ್ಳಿ: ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸುವ ಕಾರ್ಯವನ್ನು ಲಿಂ. ಶಿವಲಿಂಗೇಶ್ವರ ಸ್ವಾಮೀಜಿ ಮಾಡಿದ್ದರು. ಗುರು ತೋರಿದ ದಾರಿಯಲ್ಲಿ ಎಲ್ಲರೂ ನಡೆಯೋಣ ಎಂದು ಮುಳ್ಳಳ್ಳಿ- ಬೊಮ್ಮನಹಳ್ಳಿ ಚನ್ನವೀರೇಶ್ವರ ವಿರಕ್ತಮಠದ ಶ್ರೀ ಶಿವಯೋಗಿಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಮಂಟೂರು ಗ್ರಾಮದ ಶ್ರೀ ಅಡವಿ ಸಿದ್ಧೇಶ್ವರ ಮಠದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಲಿಂ.ಶಿವಲಿಂಗೇಶ್ವರ ಸ್ವಾಮೀಜಿ ಪ್ರಥಮ ಪುಣ್ಯ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.
ಶಿವಲಿಂಗೇಶ್ವರ ಶ್ರೀಗಳು ಮೃದು ಸ್ವಭಾವದ ಸಂಸ್ಕಾರವನ್ನು ಹೊಂದಿದ್ದರು. ಇಂಥವರು ನೇಮಿಸಿದ ಉತ್ತರಾಧಿಕಾರಿ ಶ್ರೀ ಇಂದುಧರ ದೇವರ ಪಟ್ಟಾಧಿಕಾರ ಮಹೋತ್ಸವವನ್ನು ಶೀಘ್ರದಲೇ ವಿಜೃಂಭಣೆಯಿಂದ ನೆರವೇರಿಸೋಣ ಎಂದರು.
ಹುಬ್ಬಳ್ಳಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಠದಿಂದ ಘಟವಾಗಬಾರದು. ಘಟದಿಂದ ಮಠವಾಗಬೇಕು ಎನ್ನುವ ಹಾನಗಲ್ ಶ್ರೀ ಕುಮಾರೇಶ್ವರರ ತತ್ವವನ್ನು ಲಿಂ. ಶಿವಲಿಂಗೇಶ್ವರ ಸ್ವಾಮೀಜಿ ಪಾಲಿಸಿದ್ದರು. ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಾತೃ ಹೃದಯದ ಶ್ರೀಗಳ ಕೊಡುಗೆ ಅಪಾರ ಎಂದರು.
ಕುಂದಗೋಳ ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜನರು ಮಾತನಾಡಿ, ಲಿಂ. ಶಿವಲಿಂಗೇಶ್ವರ ಸ್ವಾಮೀಜಿ ಪ್ರಚಾರ ಪ್ರಿಯರಲ್ಲ. ನಾಡಿನಲ್ಲಿಯೇ ದೊಡ್ಡ ಮಠಗಳಿಗೆ ಪೀಠಾಧಿಪತಿಗಳಾಗಿದ್ದರೂ ಎಲೆಮರೆ ಕಾಯಿಯಂತೆ ಬದುಕಿದವರು ಎಂದರು.
ಶ್ರೀಮಠದ ಪೀಠಾಧಿಪತಿ ಶ್ರೀ ಇಂದುಧರ ದೇವರು ಮಾತನಾಡಿ, ಲಿಂ.ಶಿವಲಿಂಗೇಶ್ವರ ಸ್ವಾಮೀಜಿ ಮಂಟೂರು ಸುಕ್ಷೇತ್ರವನ್ನಾಗಿ ಪರಿವರ್ತಿಸಿದ್ದಾರೆ. ಸಂಸ್ಕಾರ ನೀಡುವ ಕಾರ್ಯ ಮಾಡಿದ್ದಾರೆ. ಮಂಟೂರು, ಬಮ್ಮಿಗಟ್ಟಿ, ಗೇರಕೊಪ್ಪ, ಬಳ್ಳಿಗಾವಿಯ ಮಠಗಳ ನೇತೃತ್ವ ವಹಿಸಿದ್ದ ಶ್ರೀಗಳು ಅಧಾತ್ಮ ಬೋಧನೆ ಮಾಡಿ ಎಲ್ಲರೂ ಸನ್ಮಾರ್ಗದಲ್ಲಿ ನಡೆಯಲು ಶ್ರಮಿಸಿದ್ದಾರೆ. ಪ್ರತಿ ಕಾರ್ಯದಲ್ಲೂ ಶ್ರೀ ಅಡವಿ ಸಿದ್ಧೇಶ್ವರರನ್ನು ಕಾಣುವ ಕಾರ್ಯ ಮಾಡಿ, ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಶ್ರೀಗಳ ಕಾರ್ಯವೈಖರಿ ಸ್ಮರಣೀಯ ಎಂದರು.
ಮಂಟೂರು ಗ್ರಾಮದ ಆನಂದಶ್ರಮದ ಶ್ರೀ ಮಹಾಂತ ಸ್ವಾಮೀಜಿ, ಕಮಡೊಳ್ಳಿ ಲೋಚನೇಶ್ವರ ವಿರಕ್ತಮಠದ ಶ್ರೀ ರಾಚೋಟೇಶ್ವರ ದೇವರು, ಶ್ರೀ ಗವಿಸಿದ್ದೇಶ್ವರ ಶಾಸ್ತ್ರೀಜಿ, ಜಮಖಂಡಿಯ ಶ್ರೀ ಮಹಾಂತ ದೇವರು, ಗವಾಯಿ ಅಂದಾನಯ್ಯ ಮಠದ ಆಶೀರ್ವಚನ ನೀಡಿದರು. ಇದೇ ವೇಳೆ ದಾನಿಗಳನ್ನು ಸನ್ಮಾನಿಸಲಾಯಿತು.