ಧಾರವಾಡ ಹನುಮಂತ ನಗರದಲ್ಲಿ ಪೇಜಾವರ ಶ್ರೀಗಳಿಂದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ
ಧಾರವಾಡ: ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸಗಳಿಗೆ ನೆರವು ನೀಡುವುದು ಸತ್ಕಾರ್ಯವೇ ಆಗಿದ್ದು, ಇಂತಹ ಸತ್ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಹನುಮಂತನಗರ ಬಡಾವಣೆಯ ಶ್ರೀ ಕೃಷ್ಣ, ಶ್ರೀ ರಾಘವೇಂದ್ರ ಮತ್ತು ಮಹಾಗಣಪತಿ ದೇವತಾ ಸಮುಚ್ಚಯದ ಆವರಣದಲ್ಲಿ ನೂತನ ಸಭಾಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಸತ್ಕಾರ್ಯಗಳಿಗೆ ನೀಡಿದ ನೆರವಿನಿಂದ ಪುಣ್ಯದ ಫಲ ಹೆಚ್ಚುತ್ತದೆ. ಸಮಾಜಮುಖಿ ವ್ಯಕ್ತಿತ್ವ ಅಳವಡಿಸಿಕೊಂಡಲ್ಲಿ ಸ್ವಸ್ಥ ಸಮಾಜದ ಆಶಯ ಈಡೇರುತ್ತದೆ ಎಂದರು. ಆದಕಾರಣ ಎಲ್ಲರೂ ಇಂತಹ ಕೆಲಸಗಳಿಗೆ ಕೈಲಾದ ಸಹಾಯ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಬೆಳಗ್ಗೆ ನೆರೆದ ಭಕ್ತರಿಂದ ಗುರುಗಳ ಪಾದಪೂಜೆ ನಡೆಯಿತು. ನಂತರ ಸಂಸ್ಥಾನಪೂಜೆ ನೆರವೇರಿಸಿದ ಶ್ರೀಗಳು ಸತ್ಯ, ಧರ್ಮ ಹಾಗೂ ನ್ಯಾಯದ ಮಾರ್ಗದಲ್ಲಿ ನಡೆಯಬೇಕು. ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮ ಪರಿಪಾಲನೆ ಇಂದಿನ ಅಗತ್ಯ ಎಂದರು.
ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಭಾದ ಚಂದ್ರಶೇಖರ ಪುರಾಣಿಕ, ಕಾರ್ಯದರ್ಶಿ ಅನಂತ ಉಡುಪಿ ಅವರು ಸಭಾಭವನ ನಿರ್ಮಾಣದ ಉದ್ದೇಶ ಮತ್ತು ಯೋಜನಾ ವಿವರ ವಿವರಿಸಿದರು.
ಉಡುಪಿಯ ನಂದಳಿಕೆ ವಿಠ್ಠಲ ಭಟ್ ಅವರು ಭೂಮಿಪೂಜೆ ಧಾರ್ಮಿಕ ವಿಽ ವಿಧಾನ ನಡೆಸಿಕೊಟ್ಟರು. ಇದೇ ವೇಳೆ ಶ್ರೀಗಳು ಉದ್ದೇಶಿತ ಸಭಾಭವನದ ಪೋಸ್ಟರ್ ಬಿಡುಗಡೆ ಮಾಡಿದರು.
ಕೆ.ಎಸ್.ಎನ್. ಉರಾಳ, ಪ್ರಶಾಂತ ತಂತ್ರಿ, ಅನಂತ ಪದ್ಮನಾಭ ತಂತ್ರಿ, ಗೋಪಿ ಉಡುಪಿ, ಪ್ರಭಾಕರ ಪುರಾಣಿಕ, ಪದ್ಮನಾಭ ತಂತ್ರಿ, ನಾಗರಾಜ ಭಟ್, ನಟರಾಜ ಉಪಾಧ್ಯಾಯ, ಸುಜಯ ಉಡುಪಿ, ವಿಜಯ ಉಡುಪಿ, ಮುರಳೀಧರ ಉಡುಪಿ, ಗುರುರಾಜ ಭಟ್, ಶ್ರೀನಾಥ ಭಟ್, ಸುಂದ್ರ ಬೈಕಾಡಿ ಹಲವರು ಉಪಸ್ಥಿತರಿದ್ದರು. ಅನಂತ ಉಡುಪಿ ನಿರೂಪಿಸಿ, ವಂದಿಸಿದರು.