skills ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿಯ ತಮ್ಮ ಕಚೇರಿಯಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು.
- ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ
- ಹೊಸದಾಗಿ 7 ಕೇಂದ್ರ ಆರಂಭಿಸುವ ಚಿಂತನೆ ಇದೆ
- ಕೃಷಿ ಬಳಕೆಗಾಗಿ ಡ್ರೋನ್ ತಂತ್ರಜ್ಞಾನದ ತರಬೇತಿ ಆರಂಭಿಸುವ ಚಿಂತನೆ ಇದೆ.
ಚಿಟಗುಪ್ಪಿ ಉದ್ಯಾನ ಬಳಿಯ ಕೇಂದ್ರ ಸಚಿವರ ಕಚೇರಿ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧಾರವಾಡ ಲೋಕಸಭೆ ಕ್ಷೇತ್ರದ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಗ್ರಾಮ ವಿಕಾಸ ಸಂಸ್ಥೆಯಡಿ ಉಚಿತವಾಗಿ 1,089 ಹೊಲಿಗೆ ಯಂತ್ರ ವಿತರಿಸಲಾಗಿದೆ.
ಈವರೆಗೆ 13 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲಾಗಿದ್ದು, 11,590 ಮಂದಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ. ಇದರಲ್ಲಿ 8,000 ಮಹಿಳೆಯರು ವಿವಿಧ ಕಂಪನಿಗಳಲ್ಲಿ ಉದೊ್ಯೕಗ ಪಡೆದಿದ್ದಾರೆ ಎಂದು ಸಚಿವ ಜೋಶಿ ವಿವರಿಸಿದರು.
ವಿವಿಧ ಕಂಪನಿಗಳ ಸಹಕಾರದೊಂದಿಗೆ ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 13 ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ಮಹಿಳೆಯರಿಗೆ ಒಂದು ತಿಂಗಳು ತರಬೇತಿ ನೀಡಲಾಗುತ್ತಿದೆ.
ಹೊಸದಾಗಿ 7 ಕೇಂದ್ರ ಆರಂಭಿಸುವ ಚಿಂತನೆ ಇದೆ. ತರಬೇತಿ ಪಡೆದ ಮಹಿಳೆಯರು 40 ಸಾವಿರಕ್ಕೂ ಅಧಿಕ ಬಟ್ಟೆಗಳನ್ನು ತಯಾರಿಸಿ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ನೀಡಿರುವುದು ಶ್ಲಾಘನೀಯ ಎಂದರು.
ನಮೋ ಡ್ರೋನ್ ದೀದಿ ಯೋಜನೆಯಡಿ ಕ್ಷೇತ್ರದ ಗ್ರಾಮೀಣ ಮಹಿಳಾ ಸ್ವ ಸಹಾಯ ಸಂಘಗಳಿಗೆ ಕೃಷಿ ಬಳಕೆಗಾಗಿ ಡ್ರೋನ್ ತಂತ್ರಜ್ಞಾನದ ತರಬೇತಿ ಆರಂಭಿಸುವ ಚಿಂತನೆ ಇದೆ.ಡ್ರೋನ್ ಬಳಸಿ ಬೆಳೆಗಳಿಗೆ ಗೊಬ್ಬರ, ಕೀಟನಾಶಕ ಸಿಂಪರಣೆ ಮಾಡುವ ಕುರಿತು ತರಬೇತಿ ನೀಡಲಾಗುವುದು.
ಡ್ರೋನ್ ಖರೀದಿಗೆ ಕೇಂದ್ರ ಸರ್ಕಾರದಿಂದ ಶೇ 80ರಷ್ಟು ಸಬ್ಸಿಡಿ ಸಹ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮ ವಿಕಾಸ ಸಂಸ್ಥೆ ಅಧ್ಯಕ್ಷ ಜಗದೀಶ ನಾಯಕ, ಅಶ್ವಿನಿ ನಾಯಕ, ಇತರರಿದ್ದರು.