ಹುಬ್ಬಳ್ಳಿಯಲ್ಲಿ ದೇಶ ನಮ್ಮದೆಂಬ ಭಾವನೆಯಿಂದ ಏರ್ಪಡಿಸಿದ್ದ ಸರ್ದಾರ್ ಏಕತಾ ನಡಿಗೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು. ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಎಂಎಲ್‌ಸಿ ಪ್ರದೀಪ ಶೆಟ್ಟರ್ ಇತರರು ಇದ್ದರು. 
ಧಾರವಾಡ

ದೇಶ ನಮ್ಮದೆಂಬ ಭಾವನೆ ಮೂಡಲಿ

ಹುಬ್ಬಳ್ಳಿ: ದೇಶ ನಮ್ಮದೆಂಬ ಭಾವನೆ ಎಲ್ಲರಲ್ಲಿ ಮೂಡಬೇಕು. ಭಾರತ ಏಕತೆ ಸಾಧಿಸಿದೆ. ಈಗ ಶ್ರೇಷ್ಠ ಭಾರತ ಆಗುವತ್ತ ಸಂಕಲ್ಪ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸರ್ದಾರ್ ಃ 150 ಏಕತಾ ಅಭಿಯಾನ ನಿಮಿತ್ತ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸರ್ದಾರ್ ಏಕತಾ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಂಕಿಂಚಂದ್ರ ಚಟರ್ಜಿ ಬರೆದ ‘ವಂದೇ ಮಾತರಂ’ ಗೀತೆ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನವು 150ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಈ ನಿಟ್ಟಿನಲ್ಲಿ 21ನೇ ಶತಮಾನವು ಭಾರತದ್ದಾಗಲಿದೆ. ಇತಿಹಾಸವನ್ನು ಓದಿದದವರು ಇತಿಹಾಸ ನಿರ್ಮಾಣ ಮಾಡುವತ್ತ ದಾಪುಗಾಲಿಡಬೇಕು ಎಂದರು.
ಕೆಎಲ್‌ಇ ತಾಂತ್ರಿಕ ವಿವಿ ಸಹ ಕುಲಾಧಿಪತಿ ಡಾ. ಅಶೋಕ ಶೆಟ್ಟರ್ ಮಾತನಾಡಿ, ಸ್ವಾತಂತ್ರೃ ನಂತರ ಭಾರತದಲ್ಲಿ ಏಕತೆ ಇರಲಿಲ್ಲ. ಗೃಹ ಮಂತ್ರಿಯಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಸಂಸ್ಥಾನಗಳನ್ನು ಭಾರತಕ್ಕೆ ವಿಲೀನ ಮಾಡಿ ದೇಶವನ್ನು ಒಂದು ಮಾಡಿದರು. ಇಂಥ ಮಹಾಪುರುಷರ ಸ್ಮರಣೆ ಇಂದಿನ ಯುವಕರಿಗೆ ಅತ್ಯಗತ್ಯ. ದೇಶಕ್ಕೆ ನಮ್ಮ ಕೊಡುಗೆಯನ್ನೂ ನೀಡಬೇಕು ಎಂದರು.
ಎನ್‌ಎಸ್‌ಎಸ್ ಅಧಿಕಾರಿ ಎಂ.ಬಿ. ದಳಪತಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಎಂಎಲ್‌ಸಿ ಪ್ರದೀಪ ಶೆಟ್ಟರ್, ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಯುವ ಜನಸೇವಾಧಿಕಾರಿ ಗೌತಮರೆಡ್ಡಿ, ಇತರರು ಇದ್ದರು. ಕೆಎಲ್‌ಇ ತಾಂತ್ರಿಕ ವಿವಿಯಿಂದ ಆರಂಭವಾದ ನಡಿಗೆಯು ತೋಳನಕೆರೆ ವರೆಗೆ ತಲುಪಿ ಸಂಪನ್ನಗೊಂಡಿತು.