ಧಾರವಾಡ ಜೆಎಸ್‌ಎಸ್‌ನ ಡಿಆರ್‌ಎಚ್ ಸಭಾಂಗಣದಲ್ಲಿರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟನೆ 
ಧಾರವಾಡ

ಯುವಕರು ಸಾಹಿತ್ಯದ ಓದಿನಲ್ಲಿ ತೊಡಗಲಿ

ಧಾರವಾಡ: ಭಾರತ ವಿಶ್ವಗುರು ಎಂದು ಕರೆಯಲ್ಪಡಲು ಇಲ್ಲಿನ ಜ್ಞಾನ, ಸಂಸ್ಕೃತಿ ಮತ್ತು ತಂತ್ರಜ್ಞಾನಗಳೇ ಕಾರಣವಾಗಿವೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.
ಕವಿವಿ ಜೈನಶಾಸ್ತ್ರ ಅಧ್ಯಯನ ಪೀಠ ಹಾಗೂ ಜೆಎಸ್‌ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಜೆಎಸ್‌ಎಸ್‌ನ ಡಿಆರ್‌ಎಚ್ ಸಭಾಂಗಣದಲ್ಲಿ `ಸಾಹಿತ್ಯ-ಸಂಸ್ಕೃತಿ' ವಿಷಯ ಕುರಿತು ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ವಿದ್ಯಾರ್ಥಿಗಳಲ್ಲಿ ಸಂಸ್ಕಾರದ ಕೊರತೆ ಕಾಣುತ್ತಿದೆ. ಸಾಹಿತ್ಯದ ಓದು, ಅಧ್ಯಯನ ಇಂದಿನ ಯುವಕರಲ್ಲಿ ಮೌಲ್ಯಗಳನ್ನು ತುಂಬುವ ಕೆಲಸ ಮಾಡುತ್ತದೆ. ಅಧ್ಯಯನ ಪೀಠಗಳು ಹೆಚ್ಚಾಗಿ ಇಂತಹ ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿರಬೇಕು ಎಂದರು.
ಧಾರವಾಡ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ಜೈನ ಧರ್ಮದ ಸಂದೇಶವೇ ಅಹಿಂಸೆಯಾಗಿದ್ದು, ಅದು ಸಮಕಾಲೀನ ಜಗತ್ತಿನ ಆದ್ಯತೆಯಾಗಿದೆ ಎಂದರು. ಸಾಹಿತ್ಯ ಮತ್ತು ಸಂಸ್ಕೃತಿ ಒಂದಕೊಂದು ಬೆಸೆದುಕೊಂಡಿವೆ. ಸಂಸ್ಕೃತಿ ಸಾಹಿತ್ಯದಲ್ಲಿ ಒಡಮೂಡಿದರೆ, ಸಾಹಿತ್ಯ ಸಂಸ್ಕೃತಿಯ ಮೇಲೆ ತನ್ನ ಪ್ರಭಾವ ಬಿರುತ್ತಿದೆ ಎಂದರು.
ಕವಿವಿ ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕ ಡಾ. ಜೆ.ಎಂ. ನಾಗಯ್ಯ ಅವರು ವಿಚಾರ ಸಂಕಿರಣದ ದಿಕ್ಸೂಚಿ ನುಡಿಗಳನ್ನಾಡಿದರು. ಜೈನ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ ಧರಣೇಂದ್ರ ಜವಳಿ, ಶಾಂತರಾಜ ಮಲ್ಲಸಮುದ್ರ, ಶಾಂತಿನಾಥ ಹೋತಪೇಟಿ, ಧನಪಾಲ ಮುನ್ನೊಳಿ, ಡಾ. ರಾಯಪ್ಪ ಬಾಳಿಕಾಯಿ, ಹನುಮಾಕ್ಷಿ ಗೋಗಿ, ಮಹಾವೀರ ಉಪಾದ್ಯೆ ಇತರರಿದ್ದರು. ಜೈನ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಬಿ.ಎನ್. ಭಾವಿ ನಿರೂಪಿಸಿದರು. ಡಾ. ಸಂಗಯ್ಯ ವಂದಿಸಿದರು.