feelings ಹುಬ್ಬಳ್ಳಿ ತಾಲೂಕಿನ ತಿರುಮಲಕೊಪ್ಪದಲ್ಲಿ ಏರ್ಪಡಿಸಿದ್ದ ಜನ ಜಾಗೃತಿ ಧರ್ಮ ಸಮಾರಂಭವನ್ನು ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಉದ್ಘಾಟಿಸಿದರು. ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು ಹಾಗೂ ಇತರರಿದ್ದರು.
- ಬೇವು ಕಷ್ಟದ ಸಂಕೇತ. ಬೆಲ್ಲ ಸುಖದ ಸಂಕೇತ.
- ಕಷ್ಟ, ಸುಖಗಳನ್ನು ಸಮಾನವಾಗಿ ಸ್ವೀಕರಿಸಿ.
- ಅಂತರಂಗದ ಅಜ್ಞಾನ ಕಳೆಯಲು ಗುರು ಬೋಧ ಮುಖ್ಯ.
ತಾಲೂಕಿನ ತಿರುಮಲಕೊಪ್ಪದ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವದ ಅಂಗವಾಗಿ ಗುರುವಾರ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಗವಂತನ ಸೃಷ್ಟಿ ಅದ್ಭುತ. ಎಲ್ಲವನ್ನು, ಎಲ್ಲರನ್ನೂ ಪರಮಾತ್ಮ ಸೃಷ್ಟಿ ಮಾಡಿದ್ದರೂ ಒಬ್ಬರಂತೆ ಇನ್ನೊಬ್ಬರಿಲ್ಲದಿರುವುದೇ ಭಗವಂತನ ವೈಶಿಷ್ಟ್ಯತೆಯಾಗಿದೆ. ಯುಗಾದಿ ಪ್ರತಿ ವರುಷ ಬರುತ್ತಿದ್ದರೂ ಹೊಸ ವರುಷಕ್ಕೆ ಹೊಸ ಹರುಷ ತರುವ ಶುಭ ಮುಹೂರ್ತವಾಗಿದೆ ಎಂದರು.
ಬೇವು ಕಷ್ಟದ ಸಂಕೇತ. ಬೆಲ್ಲ ಸುಖದ ಸಂಕೇತ. ಜೀವನದಲ್ಲಿ ಬರುವ ಕಷ್ಟ, ಸುಖಗಳನ್ನು ಸಮಾನವಾಗಿ ಸ್ವೀಕರಿಸಿ, ಬಾಳುವುದೇ ಬೇವು ಬೆಲ್ಲದ ಸಂಕೇತವಾಗಿದೆ ಎಂದು ಹೇಳಿದರು.
ಉದ್ಘಾಟಿಸಿ ಮಾತನಾಡಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಲೋಕದ ಕತ್ತಲೆ ರವಿ ಕಳೆದರೆ ಅಂತರಂಗದ ಅಜ್ಞಾನ ಕಳೆಯಲು ಗುರು ಬೋಧ ಮುಖ್ಯ. ಹೊಸ ವರುಷದ ಯುಗಾದಿಯಂದು ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಆಚರಿಸುತ್ತಿರುವುದು ಭಕ್ತರ ಸೌಭಾಗ್ಯ ಎಂದರು.
ಬಂಕಾಪುರ ಅರಳೆಲೆ ಹಿರೇಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು, ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಹಾಗೂ ಮಾಗಣಗೇರಾ ಹಿರೇಮಠದ ಶ್ರೀ ಏಕಾಕ್ಷರ ಶಿವಾಚಾರ್ಯರು ಪಾಲ್ಗೊಂಡು, ಯುಗಾದಿ ಮಹತ್ವ ಕುರಿತು ಉಪದೇಶ ನೀಡಿದರು.
33 ಜಂಗಮ ವಟುಗಳಿಗೆ ಸುಳ್ಳದ ಶ್ರೀಗಳು ಶಿವದೀಕ್ಷಾ ಸಂಸ್ಕಾರ ನೀಡಿ, ಮಂತ್ರೋಪದೇಶ ಮಾಡಿದರು.
ಶಾಸಕ ಎಂ.ಆರ್. ಪಾಟೀಲ, ಚನ್ನಗಿರಿ ಮಾಜಿ ಶಾಸಕ ಮಹಿಮಾ ಪಟೇಲ, ಜಗನ್ನಾಥಗೌಡ್ರು ಸಿದ್ಧನಗೌಡ್ರ ಭಾಗವಹಿಸಿದ್ದರು. ಶ್ರೀಕಂಠಗೌಡ್ರ ಹಿರೇಗೌಡ್ರ, ನಿಂಗನಗೌಡ ಮರಿಗೌಡ್ರ, ಸಿ.ವೈ. ತರ್ಲಘಟ್ಟ, ಚನ್ನಪ್ಪ ಕಮಡೊಳ್ಳಿ, ಅಜ್ಜಯ್ಯ ಹಿರೇಮಠ ಹಾಗೂ ಇತರರು ಪಾಲ್ಗೊಂಡಿದ್ದರು.
ಸಮಾರಂಭಕ್ಕೂ ಮುನ್ನ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಹಾ ರಥೋತ್ಸವ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.