ಶ್ರೀಗುರು ವಿರೂಪಾಕ್ಷೇಶ್ವರ ಜಾತ್ರೆ ಅಂಗವಾಗಿ ಜರುಗುತ್ತಿರುವ ಶರಣರ ಜೀವನ ದರ್ಶನ ಪ್ರವಚನದಲ್ಲಿ ಶನಿವಾರ 2026ನೇ ಸಾಲಿನ ಲವಣಗಿರಿ ಪ್ರಶಸ್ತಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿಗೆ ನೀಡಿ ಗೌರವಿಸಲಾಯಿತು. ಕುಮಾರ ವಿರೂಪಾಕ್ಷ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಮುರುೇಂದ್ರ ಸ್ವಾಮೀಜಿ ಇತರರಿದ್ದರು.
- ನ್ಯಾಯಮೂರ್ತಿ ವಿ. ಶ್ರೀಶಾನಂದ ಆಶಯ
- ಶರಣರ ಜೀವನ ದರ್ಶನ ಪ್ರವಚನ
ಉಪ್ಪಿನಬೆಟಗೇರಿ: ಮನುಷ್ಯ ಅನ್ಯಾಯದ ಮಾರ್ಗದಲ್ಲಿ ಸಂಪಾದಿಸಿದ ಹಣ, ಆಸ್ತಿಗಳೆಲ್ಲವೂ ಆತನ ಅವನತಿಗೆ ಆಹ್ವಾನ ನೀಡಿದಂತೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
ಗ್ರಾಮದ ಶ್ರೀಗುರು ವಿರೂಪಾಕ್ಷೇಶ್ವರ ಜಾತ್ರೆ ಅಂಗವಾಗಿ ಶ್ರೀ ವಿರೂಪಾಕ್ಷೇಶ್ವರ ಕರ್ತು ಗದ್ದುಗೆ ಆವರಣದಲ್ಲಿ ಜರುಗಿದ ಎರಡನೇ ದಿನದ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಲವಣಗಿರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಶಿವಶರಣರ ವಚನಾಮೃತ ಕೇಳುವುದರಿಂದ ಮನಸಿನ ದುರ್ಗುಣ ನಿವಾರಣೆಯಾಗಿ ಸದ್ಗುಣಗಳು ಲಭಿಸುತ್ತವೆ. ತಂದೆ, ತಾಯಿ, ಗುರುವಿನ ಮಾರ್ಗದಲ್ಲಿ ನಡೆದು, ಅವರನ್ನು ಗೌರವದಿಂದ ಕಾಣಬೇಕು. ಮಕ್ಕಳಿಗೆ ರಾಷ್ಟ್ರ ಪ್ರೇಮ, ಉದಾತ್ತ ವಿಚಾರಗಳನ್ನು ತಿಳಿಸಬೇಕು. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿಸ್ವಾರ್ಥ ಭಾವದಿಂದ ಸೇವೆ ಮಾಡಬೇಕು. 12ನೇ ಶತಮಾನದಲ್ಲಿ ನಡೆದ ಧಾರ್ಮಿಕ ಕ್ರಾಂತಿಯಲ್ಲಿ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಲಿಂಗದೀಕ್ಷೆ ಕೊಟ್ಟರು. ಭಗವಂತನ ಮುಂದೆ ಎಲ್ಲರೂ ಸಮಾನರು ಎಂಬ ತತ್ವ ಸಾರಿದವರು ಬಸವಣ್ಣನವರು. ಹೀಗಾಗಿ ಯುವ ಪೀಳಿಗೆ ವ್ಯಸನದಂತಹ ಮಾರಕ ದುಶ್ಚಟಗಳ ದಾಸರಾಗುತ್ತಿದ್ದು, ಅವುಗಳನ್ನು ತ್ಯಜಿಸಿ ಶುದ್ಧ ಕಾಯಕ ಮಾಡಿ ಜೀವನ ನಡೆಸಬೇಕು ಎಂದರು.
ಸ್ಥಳೀಯ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಬಸವಾದಿ ಶಿವಶರಣರ ಜೀವನ ಚರಿತ್ರೆ ಅಧ್ಯಯನ ಮಾಡಿ ಅಳವಡಿಸಿಕೊಂಡರೆ ಜೀವನ ಪಾವನವಾಗಲಿದೆ ಎಂದರು.
ಘಟಪ್ರಭಾ-ಮೂಡಲಗಿ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ವೀರೇಶ್ವರ ಶಾಸ್ತ್ರೀಗಳು ಅಲ್ಲಮ ಪ್ರಭುದೇವರ ಪ್ರವಚನ ಹೇಳಿದರು. ವಕೀಲ ಎ.ಸಿ. ಚಾಕಲಬ್ಬಿ ಅಧ್ಯಕ್ಷತೆ ವಹಿಸಿದ್ದರು. ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ, ವಕೀಲರಾದ ರವೀಂದ್ರ ಯಲಿಗಾರ, ಪಿ.ಎಚ್. ನೀರಲಕೇರಿ, ಮಹದೇವ ಕುಡವಕ್ಕಲಿಗೇರ, ರವಿ ತೋರಣಗಟ್ಟಿ, ಶಶಿಧರ ಸಾಲಿ, ಸಿದ್ದಣ್ಣ ಕಂಬಾರ, ಎಸ್.ಎನ್. ಮೇಟಿ, ಅನಿಲ ನಂದೂರ, ಜಾನಪದ ಕಲಾವಿದ ರಮೇಶ ಕುರುಬಗಟ್ಟಿ ಉಪಸ್ಥಿತರಿದ್ದರು. ಎಸ್.ಕೆ. ಕೊಡಿ ಹಾಗೂ ರಮೇಶ ಮಡಿವಾಳರ ಕಾರ್ಯಕ್ರಮ ನಿರ್ವಹಿಸಿದರು.