leopard ಚಿರತೆ ಸೆರೆಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಟ್ಟಿರುವ ಬೋನು. 
ಧಾರವಾಡ

ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ಚಿರತೆ leopard

ಪ್ರಮುಖ ಮುಖ್ಯಾಂಶಗಳು

  • ಸೆರೆಗಾಗಿ ಬೋನು ಇಟ್ಟ ಅರಣ್ಯ ಇಲಾಖೆ ಸಿಬ್ಬಂದಿ.
  • ಗಾಮನಗಟ್ಟಿ ಬಳಿಯೂ ಕಂಡಿದ್ದ ಮಧ್ಯವಯಸ್ಸಿನ ಬಲಿಷ್ಠ ಲೆಪರ್ಡ್.
ವಿಮಾನ ನಿಲ್ದಾಣದ ಸಿಬ್ಬಂದಿಯ ತಂಡ ನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ನಿಲ್ದಾಣದ ಆವರಣದಲ್ಲಿ ಪರಿಶೀಲನೆ ನಡೆಸುತ್ತದೆ. ಅದೇ ರೀತಿ, ಮಂಗಳವಾರ ಸಂಜೆ 5.30ಕ್ಕೆ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ನಿಲ್ದಾಣದ ಕಂಪೌಂಡ್ ಬಳಿ ಚಿರತೆ ಕುಳಿತಿರುವುದು ಕಂಡುಬಂದಿದೆ.
ಸಿಬ್ಬಂದಿ ಕುಳಿತಿದ್ದ ವಾಹನ ಸಮೀಪ ತೆರಳುತ್ತಿದ್ದಂತೆಯೇ ಕಂಪೌಂಡ್​ನಿಂದ ತೆರಳಿ, ನಿಲ್ದಾಣದ ಮತ್ತೊಂದು ಕಡೆ ಓಡಿ ಹೋಯಿತು ಎಂದು ಮೂಲಗಳು ತಿಳಿಸಿವೆ.
ಗಾಮನಗಟ್ಟಿ ಬಳಿ ಕಳೆದ ಎರಡ್ಮೂರು ದಿನಗಳಿಂದಲೂ ಚಿರತೆ ಸುತ್ತಾಡುತ್ತಿದ್ದು, ಅದಕ್ಕೂ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಚಿರತೆಗೂ ಸಾಮ್ಯತೆ ಇರುವುದರಿಂದ ಎರಡೂ ಒಂದೇ ಇರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಚಿರತೆ ದೂರದಿಂದ ಕಾಣಿಸಿರುವುದರಿಂದ ಗಂಡು ಅಥವಾ ಹೆಣ್ಣು ಎಂದು ಸಧ್ಯಕ್ಕೆ ಹೇಳಲು ಸಾಧ್ಯವಿಲ್ಲ. ಆದರೆ, ಮಧ್ಯ ವಯಸ್ಸಿನ ಬಲಿಷ್ಠ ಚಿರತೆ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಮಾರು 957 ಎಕರೆ ವಿಸ್ತೀರ್ಣದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಂದಾಜು 200 ಎಕರೆ ಪ್ರದೇಶದಲ್ಲಿ ಗಿಡಗಂಟೆಗಳಿದ್ದು, ಚಿರತೆ ಅಡಗಿಕೊಳ್ಳಲು ಪ್ರಶಸ್ತ ಸ್ಥಳವಾಗಿದೆ.
ಹೀಗಾಗಿ, ಚಿರತೆ ಪತ್ತೆಗೆ ಕೂಂಬಿಂಗ್ ನಡೆಸುವುದೂ ಸರಳವಾಗಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.ಚಿರತೆ ಸೆರೆಗಾಗಿ ವಿಮಾನ ನಿಲ್ದಾಣದ ಆವರಣದಲ್ಲಿ ಬೋನು ಇಡಲಾಗಿದೆ.
ಬೋನಿನ ಒಂದು ಬದಿಗೆ ನಾಯಿ ಬಿಡಲಾಗಿದೆ. ನಾಯಿ ತಿನ್ನುವ ಆಸೆಗಾಗಿ ಚಿರತೆ ಬೋನು ಪ್ರವೇಶಿಸಿದರೂ, ನಾಯಿಯನ್ನು ತಿನ್ನಲು ಆಗದಿರುವಂತೆ ಮಧ್ಯೆ ಕಬ್ಬಿಣದ ಬಾಗಿಲು ನಿರ್ವಿುಸಲಾಗಿದೆ.
ಕಳೆದ ಮೂರ್ನಾಲ್ಕೂ ವರ್ಷಗಳ ಹಿಂದೆಯೂ ಚಿರತೆಯೊಂದು ಹುಬ್ಬಳ್ಳಿಯ ನೃಪತುಂಗ ಬೆಟ್ಟಕ್ಕೆ ಕಾಲಿಟ್ಟಿತ್ತು. ಕೇಂದ್ರೀಯ ವಿದ್ಯಾಲಯ, ಶಿರಡಿ ನಗರ ಹಾಗೂ ಸುತ್ತಲಿನ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದನ್ನು ಜನರು ಕಂಡಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ಕೆಲವು ದಿನ ಕಾರ್ಯಾಚರಣೆ ನಡೆಸಿದ್ದರೂ ಸಿಗದ ಚಿರತೆ, ಧಾರವಾಡದ ಬಳಿ ಸೆರೆಯಾಗಿದ್ದನ್ನು ಸ್ಮರಿಸಬಹುದು.
ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಎಎಫ್​ಒ ವಸಂತ ರೆಡ್ಡಿ, ಇಸಿಎಫ್ ವಿವೇಕ ಕವರಿ, ಎಸಿಎಪ್ ಪರಿಮಳ, ಆರ್​ಎಫ್​ಒ ಆರ್. ಎಸ್. ಉಪ್ಪಾರ, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ, ಟರ್ವಿುನಲ್ ಇನ್​ಚಾರ್ಜ್ ಪ್ರತಾಪ ಹಾಗೂ ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿ ಬುಧವಾರ ಬೆಳಗ್ಗೆ ವಿಮಾನ ನಿಲ್ದಾಣದ ಆವರಣದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಚಿರತೆ ಕಾಣಿಸಿರುವುದು ಖಚಿತವಾಗಿರುವುದರಿಂದ ಗೋಕುಲ ಹಾಗೂ ಸುತ್ತಲಿನ ಬಡಾವಣೆಗಳ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ರಾತ್ರಿ ಸಮಯದಲ್ಲಿ ಒಬ್ಬಂಟಿಯಾಗಿ ತಿರುಗದಂತೆ, ಮನೆ ಹೊರಗಡೆ ಕುಳಿತುಕೊಳ್ಳದಂತೆ, ಮಕ್ಕಳನ್ನು ರಾತ್ರಿ ಹೊರಗೆ ಬಿಡದಂತೆ ಹಾಗೂ ಇನ್ನಿತರ ಮುಂಜಾಗೃತೆಗಳನ್ನು ನೀಡಿದ್ದಾರೆ.