ವಿಮಾನ ನಿಲ್ದಾಣ ಪರಿಸರದಲ್ಲಿ ಅವಿತಿರುವ ಚಿರತೆ (Leopard).
- ವಿಮಾನ ನಿಲ್ದಾಣದ ಪರಿಸರದಲ್ಲಿ ಕ್ಯಾಮರಾ ಟ್ರ್ಯಾಪ್ಗಳನ್ನು ಇಟ್ಟಿದ್ದಾರೆ.
- ನಿಲ್ದಾಣದ ಒಳಗೆ ಜಿಗಿದಿರುವ ದೃಶ್ಯಗಳು ಕ್ಯಾಮರಾ ಟ್ರ್ಯಾಪ್ಗಳಲ್ಲಿ ಕಾಣಿಸಿಕೊಂಡಿವೆ.
- ಗಿಡಗಂಟೆಗಳ ಮಧ್ಯದಲ್ಲಿ ಹೋಗಿರುವ ಚಿರತೆ
ಕಳೆದ ಐದು ದಿನಗಳ ಹಿಂದೆ ವಿಮಾನ ನಿಲ್ದಾಣದ ಆವರಣದಲ್ಲಿ ಕಂಡುಬಂದಿದ್ದ ಚಿರತೆಯ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ನಾಯಿಗಳೊಂದಿಗೆ ಎರಡು ಪ್ರತ್ಯೇಕ ಬೋನುಗಳನ್ನು ಹಾಗೂ ಗಾಮನಗಟ್ಟಿ ಹೊರ ವಲಯ ಮತ್ತು ವಿಮಾನ ನಿಲ್ದಾಣದ ಪರಿಸರದಲ್ಲಿ ಕ್ಯಾಮರಾ ಟ್ರ್ಯಾಪ್ಗಳನ್ನು ಇಟ್ಟಿದ್ದಾರೆ.
ವಿಮಾನ ನಿಲ್ದಾಣದ ಆವರಣ ಗೋಡೆಯಿಂದ ಶುಕ್ರವಾರ ಸಂಜೆ 6.40ಕ್ಕೆ ಹೊರಗೆ ಜಿಗಿದು ಹೋಗಿರುವ ಚಿರತೆ, ಶನಿವಾರ ಬೆಳಗಿನ ಜಾವ 2 ಗಂಟೆಗೆ ಮತ್ತೆ ಗಾಮನಗಟ್ಟಿ ಕಡೆಯಿಂದ ವಿಮಾನ ನಿಲ್ದಾಣದ ಒಳಗೆ ಜಿಗಿದಿರುವ ದೃಶ್ಯಗಳು ಕ್ಯಾಮರಾ ಟ್ರ್ಯಾಪ್ಗಳಲ್ಲಿ ಕಾಣಿಸಿಕೊಂಡಿವೆ.
ವಿಮಾನ ನಿಲ್ದಾಣದ ಆವರಣದಲ್ಲಿರುವ ಗಿಡಗಂಟೆಗಳ ಮಧ್ಯದಲ್ಲಿ ಹೋಗಿರುವ ಚಿರತೆ, ಮತ್ತೆ ಶನಿವಾರ ಸಂಜೆಯವರೆಗೂ ಹೊರಗೆ ಬಂದಿರಲಿಲ್ಲ.
ಚಿರತೆ ಸಂಚರಿಸುತ್ತಿರುವ ಮಾರ್ಗದಲ್ಲಿಯೇ ಎರಡೂ ಬೋನುಗಳನ್ನು ಇಟ್ಟಿದ್ದರೂ, ಬೋನಿನತ್ತ ಚಿರತೆ ಸುಳಿದಿಲ್ಲ.
ಹಂದಿ, ಮೊಲ, ನವಿಲು, ನಾಯಿಗಳು ಗಾಮನಗಟ್ಟಿ ಹೊರವಲಯದಲ್ಲಿ ಹೇರಳವಾಗಿರುವುದರಿಂದ ಬೋನಿನಲ್ಲಿನ ನಾಯಿಯತ್ತ ಚಿರತೆ ಗಮನ ಹೋದಂತಿಲ್ಲ.
ಆದರೆ, ಚಿರತೆ ಸಂಚರಿಸುವ ಮಾರ್ಗದಲ್ಲಿಯೇ ಬೋನು ಇಟ್ಟಿರುವುದರಿಂದ ರಾತ್ರಿ ಸಮಯದಲ್ಲಿ ಬೋನಿನಲ್ಲಿ ನಾಯಿ ತಿನ್ನಲು ಪ್ರಯತ್ನಿಸಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.