Court order 
ಧಾರವಾಡ

ಭೂಮಾಪನ ಇಲಾಖೆಯ ಸರ್ವೇಯರ್​ಗೆ ಜೈಲುಶಿಕ್ಷೆ

ಧಾರವಾಡ: ರೈತನಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಕುಂದಗೋಳದ ಭೂಮಾಪನ ಇಲಾಖೆಯ ಸರ್ವೇಯರ್​ ರಾವೇಂದ್ರ ಕುಲಕರ್ಣಿ ಎಂಬುವರಿಗೆ 4 ವರ್ಷ ಜೈಲುಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಅಧಿಕ ಜಿಲ್ಲಾ ಸತ್ರ ವಿಶೇಷ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.
ಶಿರೂರ ಗ್ರಾಮದ ಮಲ್ಲಿಕಾರ್ಜುನಗೌಡ ಪಾಟೀಲ ಎಂಬುವರು ತಮ್ಮ ಜಮೀನನ್ನು ಅಳತೆ ಮಾಡಿ ಪೋಡಿ ಮಾಡಿ ಕೊಡಲು ಅಜಿರ್ ಸಲ್ಲಿಸಿದ್ದರು. ಇದಕ್ಕಾಗಿ ಸರ್ವೇಯರ್​ ರಾವೇಂದ್ರ ಕುಲಕರ್ಣಿ 15 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಲ್ಲಿಕಾರ್ಜುನಗೌಡ ಪಾಟೀಲ ಧಾರವಾಡ ಲೋಕಾಯುಕ್ತ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 2019ರ ಜೂ. 3ರಂದು ಸಂಜೆ 4 ಗಂಟೆಗೆ ಕುಂದಗೋಳ ಹೋಟೆಲ್​ವೊಂದರಲ್ಲಿ 15 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಅಂದಿನಿಂದ ವಿಚಾರಣೆ ನಡೆಯುತ್ತಿತ್ತು.
3ನೇ ಅಧಿಕ ಜಿಲ್ಲಾ ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜರೀನಾ ಅವರು ಸರ್ವೇಯರ್​ ರಾವೇಂದ್ರ ಕುಲಕರ್ಣಿ ದೋಷಿ ಎಂದು ತೀರ್ಮಾನಿಸಿ, 4 ವರ್ಷ ಜೈಲುಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಎಸ್​.ಎಸ್​. ಶಿವಳ್ಳಿ ವಾದ ಮಂಡಿಸಿದ್ದರು.