Labours day ಹುಬ್ಬಳ್ಳಿಯ ಹೆಬಸೂರ ಭವನದಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮದಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು. ಶಾಸಕ ಮಹೇಶ ಟೆಂಗಿನಕಾಯಿ, ಜಿ.ಕೆ. ಆದಪ್ಪಗೌಡರ, ಮಹದೇವ ಕರಮರಿ, ಜಯಕುಮಾರ, ಇತರರು ಇದ್ದರು.
- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ
- ಇಎಸ್ಐ ಇಪಿಎಫ್ಒ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
ಹುಬ್ಬಳ್ಳಿ: Labours day ಕಟ್ಟಡ ಕಾರ್ಮಿಕರ ಸೆಸ್ ಪ್ರತಿ ವರ್ಷ 15 ಸಾವಿರ ಕೋಟಿ ರೂ. ಸಂಗ್ರಹವಾಗುತ್ತಿದೆ. ಆದರೆ, ಕೆಲ ರಾಜ್ಯಗಳು ಅದನ್ನು ವಾಪಸ್ ಕಾರ್ಮಿಕರ ಹಿತಕ್ಕೆ ಬಳಸುತ್ತಿಲ್ಲ, ಕೆಲವೆಡೆ ಈ ಹಣ ಏನಾಯಿತು ಎಂಬುದೇ ಗೊತ್ತಾಗಿಲ್ಲ, ಹಾಗಾಗಿ ಕೇಂದ್ರ ಸರ್ಕಾರ ಇದರ ಸದ್ಬಳಕೆಗೆ ಕಾನೂನು ತರುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಇಲ್ಲಿಯ ಗೋಕುಲ ರಸ್ತೆ ಹೆಬಸೂರ ಭವನದಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮದ ವತಿಯಿಂದ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲಸದ ಆಧಾರದಲ್ಲಿ ಕಾನೂನು ಬೇಕು. ಲೇಬರ್ ಕೋಡ್ ಮೂಲಕ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಎಲ್ಲ ಕಾರ್ಮಿಕರಿಗೆ ಇಎಸ್ಐಸಿ ಮತ್ತು ಪಿಂಚಣಿ ಒದಗಿಸಬೇಕು ಎಂಬುದು ಇದರ ಉದ್ದೇಶ ಎಂದರು.
ಮಹಾತ್ಮ ಬಸವೇಶ್ವರರು ಅಂದಿನ ಕಾಲದಲ್ಲಿಯೇ ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ಕೆಲಸದ ಮಹತ್ವ ತಿಳಿಸಿದ್ದಾರೆ. ದೇಶದಲ್ಲಿ ಉದ್ಯೋಗದಾತರು ಹಾಗೂ ಉದ್ಯೋಗಿಗಳು ಪರಸ್ಪರ ಉತ್ತಮವಾಗಿದ್ದಾರೆ. ಇಬ್ಬರೂ ಇದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ದೇಶದಲ್ಲಿ ಕಾರ್ಮಿಕರ ಬಗೆಗಿನ ಚಿಂತನೆಯಲ್ಲಿ ಬದಲಾವಣೆ ಆಗಬೇಕಿದೆ ಎಂದರು.
ದೇಶದಲ್ಲಿ ಅಸಂಘಟಿತ ಕಾರ್ಮಿಕರು ಹೆಚ್ಚಿದ್ದಾರೆ. ಸುಮಾರು 80 ಕೋಟಿ ಜನರು ಕೆಲಸ ಮಾಡುತ್ತಾರೆ. ಉಳಿದವರು ಮಕ್ಕಳು, ವೃದ್ಧರು, ಅಂಗವಿಕಲರು ಇದ್ದಾರೆ. ಸಂಘಟಿತ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳು ಸಿಗುತ್ತವೆ. ಆದರೆ, ಅಸಂಘಟಿತ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಅವರಿಗೆ ಪಿಎಫ್, ಇಎಸ್ಐ ಸೌಲಭ್ಯಗಳು ದೊರೆಯಬೇಕು ಎಂಬುದು ಸರ್ಕಾರದ ಉದ್ದೇಶ ಎಂದರು.
ಇ ಶ್ರಮ ಪೋರ್ಟಲ್ ಮೂಲಕ ಸೆಲ್ಫ ಡಿಕ್ಲೇರ್ ಮಾಡಿಕೊಂಡ 33 ಕೋಟಿ ಜನ ಕಾರ್ಮಿಕರಿದ್ದಾರೆ. ಅವರೆಲ್ಲ ಅಸಂಘಟಿತರು. ದೇಶದಲ್ಲಿ ಎಂಟು ಕೋಟಿಗಿಂತ ಜಾಸ್ತಿ ಜನ ನಾವು ಉದ್ಯಮಿಗಳು ಎಂದು ಘೋಷಿಸಿಕೊಂಡಿದ್ದಾರೆ. ಕಲ್ಬುಗಿರ್ಯ ಇಎಸ್ಐಸಿ ಮೆಡಿಕಲ್ ಕಾಲೇಜ್ನಲ್ಲಿ ಯಾರೂ ಬೇಕಾದರೂ ಚಿಕಿತ್ಸೆ ಪಡೆಯಬಹುದು. ಕಾರ್ಮಿಕರು ಕೇವಲ ಇಎಸ್ಐಸಿಗೆ ಅವಲಂಬಿತರಾಗದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸಹ ಅದರ ವೆಚ್ಚವನ್ನು ಇಲಾಖೆ ಭರಿಸಲಿದೆ. ಮುಂದಿನ ದಿನಗಳಲ್ಲಿ ಪಿಎಫ್ ಹಣವನ್ನು ಎಟಿಎಂ ಮೂಲಕ ಪಡೆಯಬಹುದು ಎಂದು ಅವರು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಾರ್ಮಿಕರಿಗೆ ಸಮಾನ ವೇತನ ದೊರೆಯಬೇಕು. ಕೆಲಸದ ವೇಳೆಯನ್ನು 8 ಗಂಟೆ ನಿಗದಿಗೊಳಿಸಬೇಕು. ಕಾರ್ಮಿಕ ಕಾನೂನುಗಳನ್ನು ಬಲಿಷ್ಠಗೊಳಿಸುವ ಮೂಲಕ ದೇಶದ ಆಥಿರ್ಕ ವ್ಯವಸ್ಥೆ ಗಟ್ಟಿಗೊಳಿಸಬೇಕಿದೆ. ಕಾರ್ಮಿಕರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಹೆಚ್ಚುವರಿ ಭವಿಷ್ಯ ನಿಧಿ ಆಯುಕ್ತ ಜಯಕುಮಾರ ಅವರು, ಇಲಾಖೆಯ ವಿವಿಧ ಸೌಲಭ್ಯಗಳ ಕುರಿತು ಮಾತನಾಡಿದರು. ಇಎಸ್ಐ ಮತ್ತು ಇಪಿಎಫ್ಒ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರಗಳನ್ನು ವಿತರಣೆ ಮಾಡಲಾಯಿತು. ವೈ.ಎಸ್. ಪಾಟೀಲ ನಿರೂಪಿಸಿದರು.