ಹುಬ್ಬಳ್ಳಿಯಲ್ಲಿ (KUPMA) ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜ್ಗಳ ಆಡಳಿತ ಮಂಡಳಿಗಳ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಡಾ. ವಿಶ್ವನಾಥ ಕೊರವಿ ಮಾತನಾಡಿದರು.
ಹುಬ್ಬಳ್ಳಿ: ಕರ್ನಾಟಕ ಅನುದಾನ ರಹಿತ (KUPMA) ಪದವಿಪೂರ್ವ ಕಾಲೇಜ್ಗಳ ಆಡಳಿತ ಮಂಡಳಿಗಳ ಸಂಘ (ಕುಪ್ಮಾ)ದ ಧಾರವಾಡ ಜಿಲ್ಲಾ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದರ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಮಾ. 30ರಂದು ಬೆಳಗ್ಗೆ 10.30ಕ್ಕೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ ಕೊರವಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ರಾಜ್ಯ ಸಮಿತಿ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಕಾರ್ಯದರ್ಶಿ ಪ್ರೊ. ನರೇಂದ್ರ ನಾಯಕ್, ಡಿಡಿಪಿಯು ತೇಜಸ್ವಿನಿ ನಾರಾಯಣಕರ್, ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಹನುಮಂತಪ್ಪ ಪಾಲ್ಗೊಳ್ಳುವರು ಎಂದರು.
2022ರಲ್ಲಿ ಕುಪ್ಮಾ ಹುಟ್ಟು ಹಾಕಲಾಯಿತು. ಇಲ್ಲಿಯವರೆಗೆ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಹಾವೇರಿ, ದಾವಣಗೆರೆ ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಈಗಾಗಲೇ ಜಿಲ್ಲಾ ಸಮಿತಿಯನ್ನು ರಚಿಸಲಾಗಿದೆ. ಪ್ರತಿ ಜಿಲ್ಲೆಯ ಅನುದಾನ ರಹಿತ ಪದವಿ ಪೂರ್ವ ಕಾಲೇಜ್ಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತ ಬರಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಶೇ. 75ರಿಂದ 80 ರಷ್ಟು ವಿದ್ಯಾರ್ಥಿಗಳು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪದವಿಪೂರ್ವ ಕಾಲೇಜ್ಗಳನ್ನು ತೆಗೆದುಕೊಂಡಾಗ ಸರ್ಕಾರಿ ಕಾಲೇಜುಗಳಿಗಿಂತ ಖಾಸಗಿ ಅನುದಾನ ರಹಿತ ಕಾಲೇಜುಗಳ ಮೇಲೆ ವಿದ್ಯಾರ್ಥಿಗಳ ಹಾಗೂ ಪಾಲಕರ ಭರವಸೆ ಹೆಚ್ಚಿದೆ. ಧಾರವಾಡ ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಜಿಲ್ಲಾ ಸಂಘ ಶ್ರಮಿಸಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘದ ಗೌರವಾಧ್ಯಕ್ಷರಾದ ಜಿ.ವಿ. ವಳಸಂಗ, ಮಲ್ಲಿಕಾರ್ಜುನ ಸಾವಕಾರ, ಪ್ರಧಾನ ಕಾರ್ಯದರ್ಶಿ ನಾಗೇಶ ಅಣ್ಣಿಗೇರಿ, ಖಜಾಂಚಿ ನೂರಅಹ್ಮದ್ ಧಾರವಾಡ, ಸದಸ್ಯ ಅಯೂಬ್ ಸವಣೂರ ಇದ್ದರು.