ಕುಂದಗೋಳ ತಾಲೂಕಿನ ಶಿರೂರ ಗ್ರಾಮದಲ್ಲಿ ಜರುಗಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿನಿಯರ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು, ಉಪನ್ಯಾಸಕರು ಮತ್ತು ಗ್ರಾಮಸ್ಥರು.
- ಶ್ರೀ ಶಿವಾನಂದ ಮಹಾಸ್ವಾಮೀಜಿ ಸಲಹೆ
- ಕೃಷಿ ಕಾರ್ಯಾನುಭವ ಶಿಬಿರ
ಕುಂದಗೋಳ: ರೈತರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಣ್ಣು ಮತ್ತು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಶ್ರೀ ಕುಂದಗೋಳ ಶಿವಾನಂದ ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಶಿರೂರು ಗ್ರಾಮದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿನಿಯರ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಏರ್ಪಡಿಸಿದ್ದ ರೈತ ಸಿರಿ ಕೃಷಿ ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಉತ್ತಮ ಸಂಸ್ಕಾರ, ಶಿಸ್ತು, ಮಾನವೀಯ ಮೌಲ್ಯ ಮತ್ತು ಪರಸ್ಪರ ಗೌರವ ಹೊಂದಿರಬೇಕು. ಶಿರೂರು ಗ್ರಾಮದ ರೈತರಲ್ಲಿರುವ ಶ್ರಮ, ಒಗ್ಗಟ್ಟು ಹಾಗೂ ಉತ್ತಮ ಸಂಸ್ಕಾರಗಳನ್ನು ಶ್ಲಾಘಿಸಿದರು. ಆಧುನಿಕ ತಂತ್ರಜ್ಞಾನ ಹಾಗೂ ಸುಸ್ಥಿರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಡಾ. ಬಿ.ಆರ್. ಜಗದೀಶ ಅವರು, ಮಣ್ಣಿನ ಆರೋಗ್ಯ, ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಸಮತೋಲಿತ ಪೋಷಕಾಂಶ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಡಾ. ಮನು ಬಲರಾಮ ಅವರು, ಸುಧಾರಿತ ಕಾಳು ಬೆಳೆ ತಳಿಗಳು, ಹವಾಮಾನಕ್ಕೆ ಹೊಂದುವ ತಂತ್ರಜ್ಞಾನ ಹಾಗೂ ಉತ್ಪಾದಕತೆ ಹೆಚ್ಚಿಸುವ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಿದರು.
ಈಶ್ವರಪ್ಪ ಬೆಂಗೇರಿ, ಸಾವಯವ ಕೃಷಿಯ ಮಹತ್ವ, ಸ್ಥಳೀಯ ಸಂಪನ್ಮೂಲಗಳನ್ನು ಬಳಸುವ ಮೂಲಕ ಸುಸ್ಥಿರ ಕೃಷಿ ಅಳವಡಿಸಿಕೊಳ್ಳುವ ಕುರಿತು ಸಲಹೆ ನೀಡಿದರು.
ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಶ್ರೀಪಾದ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಡಾ. ಗಿರೀಶ ಮರಡ್ಡಿ, ಈಶ್ವರಪ್ಪ ಬೆಂಗೇರಿ, ಯಲ್ಲಪ್ಪ ಎಂ., ಶಿವಪುತ್ರಯ್ಯ ಹಿರೇಮಠ, ಡಾ. ಬಿ.ಆರ್. ಜಗದೀಶ, ಡಾ. ಮನು ಬಲರಾಮ, ಯಲ್ಲಪ್ಪ ಎಂ., ಇದ್ದರು.
ಶಿಬಿರದ ಸಂಯೋಜಕ ಡಾ. ಶಿವಾನಂದ ಕಮ್ಮಾರ, ಸಹ-ಸಂಯೋಜಕ ಡಾ. ಜಿ.ಎಂ. ಹಿರೇಮಠ, ಡಾ. ಅನಿಲಕುಮಾರ ಜಿ.ಕೆ., ಹಾಗೂ ಡಾ. ರವಿಕುಮಾರ ಹೊಸಮನಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಿತು.
ಕೃಷಿಕ ಪ್ರದರ್ಶನದಲ್ಲಿ ವಿದ್ಯಾರ್ಥಿನಿಯರು ಎರಡು ತಿಂಗಳ ಕ್ಷೇತ್ರಾನುಭವದ ಆಧಾರದ ಮೇಲೆ ವಿವಿಧ ಬೆಳೆ ಪದ್ಧತಿಗಳು, ಮಣ್ಣು ಮತ್ತು ನೀರು ಸಂರಕ್ಷಣೆ, ಸಮಗ್ರ ಕೃಷಿ ಪದ್ಧತಿ, ಅಣಬೆ ಬೇಸಾಯ, ಅಜೋಲಾ ಉತ್ಪಾದನೆ, ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆ, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳು ಹಾಗೂ ಜಾನುವಾರು ನಿರ್ವಹಣೆ ಕುರಿತ ಮಾದರಿ ಮತ್ತು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿ ರೈತರಿಗೆ ಮಾಹಿತಿ ನೀಡಿದರು.