ಸೇವಾ ನಿವೃತ್ತಿಯಾದ ಕಾರು ಚಾಲಕನಿಗೆ ಮೌಲ್ಯಮಾಪನ ಕುಲಸಚಿವ ಮನೆವರೆಗೆ ಡ್ರಾಪ್
- ಸೇವಾ ನಿವೃತ್ತಿಯಾದ ಕಾರು ಚಾಲಕನಿಗೆ ಮನೆವರೆಗೆ ಡ್ರಾಪ್
- ಡಾ. ನಿಜಲಿಂಗಪ್ಪ ಮಟ್ಟಿಹಾಳ ಅವರ ಕಾರು ಚಾಲಕನಾಗಿದ್ದ ರುದ್ರಪ್ಪ ಅಜ್ಜನ್ನವರ
- ಮೌಲ್ಯಮಾಪನ ಕುಲಸಚಿವ ಕಾರು ಚಾಲನೆ ಮಾಡಿ ರುದ್ರಪ್ಪ ಅವರ ಮನೆಯವರೆಗೆ ಡ್ರಾಪ್
ಧಾರವಾಡ: ಸುಧೀರ್ಘ 22 ವರ್ಷ 9 ತಿಂಗಳು ಕರ್ನಾಟಕ ವಿಶ್ವವಿದ್ಯಾಲಯದ ಹಲವು ಕುಲಪತಿಗಳು ಹಾಗೂ ಕುಲಸಚಿವರಿಗೆ ಕಾರು ಚಾಲಕರಾಗಿದ್ದವರು ರುದ್ರಪ್ಪ ಅಜ್ಜನ್ನವರ. ಅವರ ಸೇವಾ ನಿವೃತ್ತಿಯ ಕೊನೆಯ ದಿನ ಮೌಲ್ಯಮಾಪನ ಕುಲಸಚಿವರು ಕಾರು ಚಾಲನೆ ಮಾಡಿ, ರುದ್ರಪ್ಪ ಅವರನ್ನು ಮನೆಗೆ ಬಿಟ್ಟು ಬಂದ ಅಪರೂಪದ ಘಟನೆ ಶನಿವಾರ ನಡೆಯಿತು.
ಸೇವಾ ನಿವೃತ್ತಿಯಾದ ರುದ್ರಪ್ಪ ಅವರಿಗೆ ಕವಿವಿಯಲ್ಲಿ ಬೀಳ್ಕೊಡುಗೆ ನೀಡಲಾಯಿತು. ನಂತರ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಸಮೀಪದ ಬಸವನಗರದಲ್ಲಿರುವ ರುದ್ರಪ್ಪ ಅವರ ಮನೆಯವರೆಗೆ ಮುಂದಿನ ಸೀಟ್ನಲ್ಲಿ ಕೂರಿಸಿಕೊಂಡು ಬಿಟ್ಟು ಬಂದರು.
ಕುಲಸಚಿವ ರಜನೀಶ ಗೋಯಲ್ ಅಧಿಕಾರಾವಧಿಯಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡಿದ್ದ ರುದ್ರಪ್ಪ, ಕುಲಪತಿಗಳಾಗಿದ್ದ ಡಾ.ಪಠಾಣ್, ಡಾ. ಖಾಜಾಪೀರ, ಡಾ. ಎಸ್.ಕೆ. ಸೈದಾಪೂರ ಮತ್ತು ಡಾ. ಎಚ್.ಬಿ. ವಾಲಿಕಾರ ಹಾಗೂ ಪ್ರಭಾರ ಕುಲಪತಿ ಡಾ. ಮುರಿಗೆಪ್ಪ ಅವರಿಗೆ ಕಾರು ಚಾಲಕರಾಗಿದ್ದರು. ಸುಮಾರು 8 ವರ್ಷ ಮೌಲ್ಯಮಾಪನ ಕುಲಸಚಿವರಾದ ಡಾ. ಬಸವಣ್ಣ, ಡಾ. ಸಾಲಿ, ಡಾ.ನಾಗರಾಜ, ಡಾ. ಸಿ. ಕೃಷ್ಣಮೂರ್ತಿ ಹಾಗೂ ಡಾ. ನಿಜಲಿಂಗಪ್ಪ ಮಟ್ಟಿಹಾಳ (2 ಅವಧಿಗೆ) ಅವರ ಕಾರು ಚಾಲಕನಾಗಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ರುದ್ರಪ್ಪ ಅಜ್ಜನ್ನವರ, ಸೇವಾವಧಿಯಲ್ಲಿ ವಿಶ್ವವಿದ್ಯಾಲಯದ ಅತ್ಯುನ್ನತ ಹುದ್ದೆಯಲ್ಲಿದ್ದ ಎಲ್ಲರೂ ಪ್ರೀತಿ, -ವಿಶ್ವಾಸದಿಂದ ನೋಡಿಕೊಂಡಿದ್ದಾರೆ. ನಿವೃತ್ತಿಯಂದು ಕುಲಸಚಿವರು ಮನೆಯವರೆಗೆ ಬಂದು ಬೀಳ್ಕೊಟ್ಟಿದ್ದು ಖುಷಿ ತಂದಿದೆ ಎಂದರು.