ಧಾರವಾಡ: ವಿಶ್ವವಿದ್ಯಾಲಯ ಮಟ್ಟದ ಯುವಜನೋತ್ಸವ ಎಂದರೆ ಅದೊಂದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಇದ್ದ ಹಾಗೆ. ಇಲ್ಲಿ ಭಾಗವಹಿಸಿದವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ವಿಭಿನ್ನ ಸಂಸ್ಕೃತಿ, ಕಲೆ ಪ್ರದರ್ಶಿಸುವುದಕ್ಕೆ ಯುವಜನೋತ್ಸವ ಉತ್ತಮ ವೇದಿಕೆಯಾಗಿದೆ ಎಂದು ಕವಿವಿ ಕುಲಪತಿ ಪ್ರೊ.ಎ.ಎಂ.ಖಾನ್ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ `ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ ಕಾಲೇಜು ಧಾರವಾಡ ವಲಯ ಮಟ್ಟದ ಯುವಜನೋತ್ಸವ: 2025 ಯೂನಿಫೆಸ್ಟ್' ಉದ್ಘಾಟಿಸಿ ಅವರು ಮಾತನಾಡಿದರು. ಯುವಜನೋತ್ಸವ ನಮ್ಮ ಭಾರತದ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿ ಅನಾವರಣಗೊಳಿಸುತ್ತದೆ. ಯುವಜನೋತ್ಸವದ ವಿಜೇತರು, ನಮ್ಮ ವಿಶ್ವವಿದ್ಯಾಲಯ ಪ್ರತಿನಿಽಸಿ ರಾಷ್ಟçಮಟ್ಟದಲ್ಲಿ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರಬೇಕು ಎಂದರು.
ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಕರೀಮುನ್ನೀಸಾ ಸಯ್ಯದ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ನೋವು, ನಲಿವು, ಅವಮಾನ ಎಲ್ಲವೂ ಇರುತ್ತವೆ. ಅದೆಲ್ಲವನ್ನು ನಾವು ಮೆಟ್ಟಿ ನಿಲ್ಲಬೇಕು. ಕ್ರೀಡೆ, ಎನ್‌ಸಿಸಿ, ಎನ್‌ಎಸ್‌ಎಸ್ ಮುಂತಾದವುಗಳಲ್ಲಿ ಭಾಗವಹಿಸಿದಾಗ ಮಾತ್ರ ನಾವು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ. ನಾವು ಒಳ್ಳೆಯ ದಾರಿಯಲ್ಲಿದ್ದರೆ ಖಂಡಿತವಾಗಿಯೂ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದರು.
ನಿವೃತ್ತ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಯುವಜನೋತ್ಸವಗಳು ಪ್ರೇರಣೆ. ವಿದ್ಯಾರ್ಥಿಗಳೆಂದರೆ ಕನಸ್ಸು ಮತ್ತು ಕಲ್ಪನೆ ಇದ್ದ ಹಾಗೆ. ಆದರ್ಶ ವ್ಯಕ್ತಿಗಳಾಗಿ ರೂಪಗೊಳ್ಳಬೇಕು ಎಂದರು.
ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಎಸ್.ಬಿ.ಶಿವಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಕವಿವಿ ಸಿಂಡಿಕೇಟ್ ಸದಸ್ಯ ರತ್ನಾ ಪಾಟೀಲ, ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಎಸ್.ಕೆ. ಪವಾರ, ಸಿ.ಎಸ್.ಪಾಟೀಲ, ಅಶೋಕ ಚಿಕ್ಕೋಡಿ, ವಿದ್ಯಾರ್ಥಿ ಪ್ರತಿನಿಽ ಅಕ್ಷತಾ ನರಗುಂದ ಇದ್ದರು. ಸುಷ್ಮಾ ಪ್ರಾರ್ಥಿಸಿದರು. ಡಾ.ನೀಲಕ್ಕ ಪಾಟೀಲ ಸ್ವಾಗತಿಸಿದರು. ಪ್ರೊ.ಎಸ್.ಎಸ್.ಸಂಗೊಳ್ಳಿ ಪರಿಚಯಿಸಿದರು. ಡಾ.ಬಾಬು ಬೆಣ್ಣಿಯವರ ನಿರೂಪಿಸಿದರು. ಡಾ.ರಹಿಮಾನ್ ಗೊರಜನಾಳ ವಂದಿಸಿದರು. ವಿವಿಧ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಿ.13ರಂದೂ ಯುವಜನೋತ್ಸವ ನಡೆಯಲಿದೆ.
ಯುವಜನೋತ್ಸವದಲ್ಲಿ ಶಾಸ್ತ್ರೀಯ ಗಾಯನ, (ಹಿಂದೂಸ್ತಾನಿ/ಕರ್ನಾಟಕಿ), ವಾದ್ಯಸಂಗೀತ (ತಾಳವಾದ್ಯ-ಸ್ವರ-ವಾದ್ಯ), ಲಘು ಗಾಯನ (ಭಾರತೀಯ), ಪಾಶ್ಚಿಮಾತ್ಯ ಗಾಯನ, ಸಮೂಹ ಗಾಯನ, ಫೋಕ್ ಆರ್ಕೆಸ್ಟ್ರಾ, ಪಾಶ್ಚಿಮಾತ್ಯ ವಾದ್ಯಸಂಗೀತ, ಜಾನಪದ/ಬುಡಕಟ್ಟು ನೃತ್ಯ, ಶಾಸ್ತ್ರೀಯ ನೃತ್ಯ (ಭಾರತೀಯ), ರಸಪ್ರಶ್ನೆ ಸ್ಪರ್ಧೆ, ಭಾಷಣ ಸ್ಪರ್ಧೆ, ಚರ್ಚಾಸ್ಪರ್ಧೆ, ಏಕಾಂಕ ನಾಟಕ, ಸ್ಕಿಟ್, ಮೈಮ್, ಮಿಮಿಕ್ರಿ, ಚಿತ್ರಕಲೆ, ಕೊಲಾಜ್, ಪೋಸ್ಟರ್ ತಯಾರಿಕೆ, ಕ್ಲೇ ಮಾಡೆಲಿಂಗ್, ಕಾರ್ಟೂನಿಂಗ್, ರಂಗೋಲಿ, ಸ್ಪಾಟ್ ಫೋಟೋಗ್ರಾಫಿ, ಇನ್‌ಸ್ಟಾಲೇಶನ್, ಮೆಹಂದಿ ಸೇರಿ 27 ಸ್ಪರ್ಧೆಗಳು ನಡೆದವು.