kslu ಕೆಎಸ್ಎಲ್ಯು ಆಡಳಿತ ಕಚೇರಿ ಕಟ್ಟಡ.
- ಅಗತ್ಯ ಮಾಹಿತಿ ಕೇಳಿದ ಸರ್ಕಾರ
- ಕೆಎಸ್ಎಲ್ಯು ಕುಲಸಚಿವರಿಗೆ ಬಂದಿದೆ ಪತ್ರ
ಹುಬ್ಬಳ್ಳಿ: kslu ಉತ್ತರ ಕರ್ನಾಟಕದ ಬಗ್ಗೆ ಬಹುತೇಕ ಸರ್ಕಾರಗಳು ತಾರತಮ್ಯ ಧೋರಣೆ ಅನುಸರಿಸುತ್ತ ಬಂದಿವೆ ಎಂಬ ಭಾವನೆ ಗಟ್ಟಿಯಾಗಿರುವಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಬರೆದಿರುವ ಪತ್ರ ಇದೀಗ ಆಕ್ರೋಶ ಭುಗಿಲೇಳುವಂತೆ ಮಾಡಿದೆ.
ಇಲ್ಲಿಯ ನವನಗರದಲ್ಲಿ 2009ರಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್ಎಲ್ಯು) ಈಗಷ್ಟೇ ಮೂಲ ಸೌಲಭ್ಯಗಳನ್ನು ಒಂದೊಂದಾಗಿ ನಿರ್ಮಿಸಿಕೊಳ್ಳುತ್ತಿದೆ. ಆಡಳಿತ ಕಚೇರಿ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಇನ್ನೂ ಅನೇಕ ಸವಲತ್ತುಗಳನ್ನು ಕಲ್ಪಿಸಬೇಕಾಗಿದೆ.
ಈ ಮಧ್ಯೆ ರಾಜ್ಯ ಸರ್ಕಾರದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಕೆಎಸ್ಎಲ್ಯು ಕುಲಸಚಿವರಿಗೆ ಪತ್ರ ಬರೆದು, ಕರ್ನಾಟಕ ರಾಜ್ಯ ದಕ್ಷಿಣ ಕಾನೂನು ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಬೆಂಗಳೂರು ಅಥವಾ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಸ್ತಾವನೆಯನ್ನು ಪರಿಶೀಲಿಸಲು ನಾಲ್ಕು ಅಂಶಗಳ ಮಾಹಿತಿ ಸಲ್ಲಿಸುವಂತೆ ಪತ್ರದಲ್ಲಿ ಕೋರಲಾಗಿದೆ.
ವಿಶ್ವವಿದ್ಯಾಲಯ ಸ್ಥಾಪನೆಯಿಂದ ಉಂಟಾಗುವ ಆರ್ಥಿಕ ಹೊರೆ, ಅವಶ್ಯವಿರುವ ಅಧಿಕಾರಿ, ಸಿಬ್ಬಂದಿ ವಿವರ, ವಿವಿ ಸ್ಥಾಪನೆಗೆ ಕನಿಷ್ಠ ಎಷ್ಟು ಜಮೀನಿನ ಅವಶ್ಯಕತೆ ಇದೆ ಹಾಗೂ ಮೂಲ ಸೌಕರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಕಳೆದ ಜುಲೈ 31ರಂದು ಕುಲಸಚಿವರಿಗೆ ಪತ್ರ ಬರೆಯಲಾಗಿದೆ.
ಕೆಎಸ್ಎಲ್ಯು ಸ್ಥಾಪನೆಯಾಗಿ ಹಲವು ವರ್ಷಗಳ ನಂತರ ರಾಜ್ಯದ ಕಾನೂನು ಕಾಲೇಜುಗಳು ಹಂತಹಂತವಾಗಿ ವ್ಯಾಪ್ತಿಗೆ ಬಂದಿವೆ. ಆರಂಭದ ಅನುದಾನ ಬಿಟ್ಟರೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡದೇ ವಿವಿಯ ಅನೇಕ ಕಟ್ಟಡಗಳು ತಡವಾಗಿ ನಿರ್ಮಾಣವಾಗುತ್ತಿವೆ. ರಾಜ್ಯದ ಎಲ್ಲ ಕಾನೂನು ಕಾಲೇಜುಗಳು ವಿವಿ ವ್ಯಾಪ್ತಿಗೆ ಬಂದರೆ ಶಕ್ತಿ ಬರುತ್ತದೆ. ಸ್ವತಂತ್ರವಾಗಿ ನಿರ್ವಹಣೆ ಮಾಡಲು ಬಲ ಬರುತ್ತದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.
ಹೀಗಿರುವಾಗ ಇದೀಗ ರಾಜ್ಯದ ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ಮತ್ತೊಂದು ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾಪ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು ಭಾಗದ ವಿದ್ಯಾರ್ಥಿಗಳು ಹುಬ್ಬಳ್ಳಿಗೆ ಬಂದು ಹೋಗುವುದು ತೊಂದರೆದಾಯಕ. ಅಲ್ಲದೇ ಬೆಂಗಳೂರು ಹಾಗೂ ಸುತ್ತಮುತ್ತ ಸುಮಾರು 70 ಕಾನೂನು ಕಾಲೇಜುಗಳು ಇವೆ. ಅವುಗಳಿಗೆಲ್ಲ ಬೆಂಗಳೂರು ಕೇಂದ್ರಿತ ವಿವಿ ಬೇಕೆಂಬುದು ಆ ಭಾಗದ ಜನರ ಬೇಡಿಕೆಯಾಗಿದೆ.
ಹುಬ್ಬಳ್ಳಿಯಲ್ಲಿ ಕಾನೂನು ವಿವಿ ಸ್ಥಾಪನೆ ಮಾಡುವ ಸಂದರ್ಭದಲ್ಲಿ ಬೆಂಗಳೂರಲ್ಲಿ ಕಾನೂನು ವಿವಿಯ ಪ್ರಾದೇಶಿಕ ಕೇಂದ್ರ ಹಾಗೂ ಕಾಲೇಜು ಆರಂಭಿಸುವುದು ಉತ್ತಮ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಆದರೆ, ಅದು ಕೈಗೂಡಿರಲಿಲ್ಲ. ಇದೀಗ ಪ್ರಾದೇಶಿಕ ಕೇಂದ್ರ ಮಾಡಬೇಕು. ದಕ್ಷಿಣ ಕರ್ನಾಟಕ ಕಾನೂನು ವಿವಿ ಸ್ಥಾಪನೆ ಮಾಡಬಾರದು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಸದ್ಯ ಕಾನೂನು ಇಲಾಖೆಯನ್ನೂ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ವಿಷಯವನ್ನು ಹೇಗೆ ನಿಭಾಯಿಸುವರು ಎಂಬ ಕುತೂಹಲ ಉ.ಕ. ಭಾಗದ ಜನರಿಗೆ ಇದೆ.
ಈ ಭಾಗದ ಜನಪ್ರತಿನಿಧಿಗಳು ಪ್ರಾದೇಶಿಕ ಅಸಮತೋಲನ ನಿವಾರಣೆ ಸಲುವಾಗಿ ಉತ್ತರ ಕರ್ನಾಟಕಕ್ಕೆ ಕಾನೂನು ವಿವಿಯನ್ನು ತೆಗೆದುಕೊಂಡು ಬಂದಿದ್ದಾರೆ. ಇದೀಗ ದಕ್ಷಿಣಕ್ಕೆ ಬೇರೆ ವಿವಿ ಸ್ಥಾಪನೆಯಾದರೆ ಅರ್ಧದಷ್ಟು ಕಾಲೇಜುಗಳು ಅದರ ವ್ಯಾಪ್ತಿಗೆ ಹೋಗಲಿವೆ. ಇದರಿಂದ ಕೆಎಸ್ಎಲ್ಯು ಕಳೆಗುಂದಲಿದೆ ಎಂಬ ಆತಂಕ ಮನೆ ಮಾಡಿದೆ.