ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್‌ಸಿಎ ಮೈದಾನವನ್ನು ಕೆಎಸ್‌ಸಿಎ (ksca) ಅಧ್ಯಕ್ಷ ವೆಂಕಟೇಶ ಪ್ರಸಾದ ಬುಧವಾರ ವೀಕ್ಷಿಸಿದರು. 
ಧಾರವಾಡ

(ksca) ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೆ ಬರಲಿದೆ ಮೆರಗು

ಹುಬ್ಬಳ್ಳಿ: ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದಿಂದ ಸಂಭ್ರಮ ಕಳೆದುಕೊಂಡಿದ್ದ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೆ ಮೆರಗು ಬರಲಿದೆ. ರಾಜ್ಯ ಸರ್ಕಾರ ಗುರುವಾರ ನಡೆಸಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಪ್ರಕಟಿಸಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ksca) ಅಧ್ಯಕ್ಷ ವೆಂಕಟೇಶ ಪ್ರಸಾದ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಕ್ರಿಕೆಟ್ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಉತ್ಸುಕರಾಗಿದ್ದಾರೆ. ಬೆಳಗಾವಿಗೆ ತೆರಳಿ ಅವರನ್ನು ಭೇಟಿ ಮಾಡಿದ ವೇಳೆ ಸಿಹಿ ಸುದ್ದಿ ಕೊಟ್ಟಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದರು.
ಕೆಎಸ್‌ಸಿಎ ಹಳೆಯ ಸಮಿತಿ ಏನು ಮಾಡಿದೆ ಎಂದು ನಾವು ಹೇಳುವುದಿಲ್ಲ. ನಾವು ಏನು ಮಾಡಲಿದ್ದೇವೆ ಎಂಬುದನ್ನು ವಿವರಿಸುತ್ತೇವೆ ಮತ್ತು ಕಾಳಜಿ ತೋರುತ್ತೇವೆ. ಬೆಳಗಾವಿ, ಹುಬ್ಬಳ್ಳಿ ಸೇರಿ ಇತರೆಡೆ ಇರುವ ಕ್ರೀಡಾಂಗಣಗಳ ಅಭಿವೃದ್ಧಿಗೆ ಆದ್ಯತೆ ಕೊಡುತ್ತೇವೆ. ಕ್ರಿಕೆಟ್ ಅನ್ನು ಚೆನ್ನಾಗಿ ಬೆಳೆಸುವ ಉಮೇದಿ ನಮ್ಮಲ್ಲಿದೆ. ಸದ್ಯ ನಾವು ಕ್ರಿಕೆಟ್ ಆಡಿಸುವ ಬಗ್ಗೆ ತಲೆಕೆಡಿಸಿಕೊಂಡಿದ್ದೇವೆ. ಹುಬ್ಬಳ್ಳಿ ಮತ್ತು ಬೆಳಗಾವಿ ಕೆಎಸ್‌ಸಿಎ ಮೈದಾನದ ಯೋಜನಾ ವರದಿ ಕೊಡಲು ಹೇಳಿದ್ದೇವೆ. ವರದಿ ಬಂದ ನಂತರ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಉತ್ತರ ಕರ್ನಾಟಕದಿಂದಲೂ ಪ್ರತಿಭೆಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿದ್ದಾರೆ. ಪ್ರತಿಭೆ ಇದ್ದರೆ ಕ್ರೀಡಾಪಟುಗಳು ತಾವೆ ಬೆಳೆಯುತ್ತಾರೆ. ನಾವು ಅಂಥವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಕರ್ನಾಟಕದಿಂದ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ನೋಡಿಕೊಳ್ಳುತ್ತೇವೆ ಎಂದರು.
ಕಾರ್ಯದರ್ಶಿ ಸಂತೋಷ ಮೆನನ್ ಮಾತನಾಡಿ, ಹಿಂದಿನ ಸಮಿತಿ ಅವ್ಯವಹಾರ ಮಾಡಿದೆ ಎಂಬ ಗಾಳಿ ಮಾತು ನಂಬಲ್ಲ. ಅಧಿಕೃತವಾಗಿ ದಾಖಲೆಗಳು ಇದ್ದರೆ ಮಾತನಾಡಬಹುದು. ಆದರೂ ಒಂದಿಷ್ಟು ಲಕ್ಷೃ ಕೊಡುತ್ತೇವೆ. ವಲಯವಾರು ಸವಲತ್ತು ಕೊಟ್ಟು ಪ್ರತಿಭೆಗಳಿಗೆ ಪೂರಕವಾದ ವಾತಾವರಣ ನಿರ್ಮಿಸಲಿದ್ದೇವೆ ಎಂದರು.
ಉಪಾಧ್ಯಕ್ಷ ಸುಜಿತ್ ಸೋಮಸುಂದರ, ವಿನಯ ಮೃತ್ಯುಂಜಯ, ಧಾರವಾಡ ವಲಯ ಸಂಯೋಜಕ ವೀರಣ್ಣ ಸವಡಿ, ದುರ್ಗಾ ಡೆವೆಲಪರ್ಸ್ ಆ್ಯಂಡ್ ಪ್ರಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕ ವೀರೇಶ ಉಂಡಿ, ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ ಇತರರು ಇದ್ದರು.