kps rools ಸಭಾಪತಿ ಬಸವರಾಜ ಹೊರಟ್ಟಿ.
- ಸಚಿವರಿಗೆ ಸಭಾಪತಿ ಹೊರಟ್ಟಿ ಪತ್ರ
- ಅನುದಾನಿತ ಶಾಲೆಗಳು ಮುಚ್ಚದಂತೆ ಕ್ರಮ ವಹಿಸಿ
ಹುಬ್ಬಳ್ಳಿ: kps rools ಒಂದೇ ಕಾಂಪೌಂಡ್ನಲ್ಲಿ ಪ್ರಾಥಮಿಕದಿಂದ ಪಿಯುಸಿವರೆಗಿನ ತರಗತಿಗಳಿರುವ ಶಾಲೆಗಳನ್ನು ಮಾತ್ರ ಕೆಪಿಎಸ್ ಶಾಲೆಗಳನ್ನಾಗಿ ಉಳಿಸಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಲಾಗಿದೆ.
ಹಾವೇರಿ ಜಿಲ್ಲೆಯ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಬ್ಯಾಡಗಿ ತಾಲೂಕು ಘಟಕ ಚಿಕ್ಕಬಾಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಉನ್ನತಿಕರಿಸಿ 8ನೇ ತರಗತಿಯನ್ನು ಪ್ರಾರಂಭಿಸುವುದನ್ನು ತಡೆಹಿಡಿಯಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಚಿವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಬೇರೆ ಬೇರೆ ಆವರಣ ಅಥವಾ ಕಡಿಮೆ ಅಂತರದಲ್ಲಿರುವ ಶಾಲೆಗಳನ್ನು ಕೆಪಿಎಸ್ ಅಡಿಯಲ್ಲಿ ತರುವ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿರುವ ಪಕ್ಕದ ಅನುದಾನಿತ ಶಾಲೆಗಳು ಮುಚ್ಚದಂತೆ ಇಲಾಖಾ ಮಟ್ಟದಲ್ಲಿ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯ ಪಾರದರ್ಶಕತೆ ಮತ್ತು ಶಿಕ್ಷಣ ಸಂಸ್ಥೆಗಳ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ಪ್ರಸ್ತುತ ಇಲಾಖೆಯಲ್ಲಿರುವ ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರಿಂದ ಶಿಕ್ಷಕರ ಕೊರತೆಯ ಕಾರಣ ಪಾಠ ಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಗುಣಾತ್ಮಕ ಶಿಕ್ಷಣವನ್ನು ನಿರೀಕ್ಷಿಸುವುದಾದರು ಹೇಗೆ? ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಬಿಟ್ಟು ಹೊಸ ಶಾಲೆಗಳನ್ನು ತೆರೆದರೆ ಹಾಗೂ ಇರುವ ಶಾಲೆಗಳನ್ನು ಉನ್ನತಿಕರಿಸಿದರೆ ಸಿಬ್ಬಂದಿ ಪೂರೈಸುವುದಾದರು ಎಲ್ಲಿಂದ?