ಹುಬ್ಬಳ್ಳಿಯ ಕೋರ್ಟ್​ನಿಂದ ಆರ್​ಪಿಎಫ್ ಸಿಬ್ಬಂದಿಯೊಂದಿಗೆ ಹೊರಬರುತ್ತಿರುವ ರೈತಪರ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ.  
ಧಾರವಾಡ

ಕೋಡಿಹಳ್ಳಿ ಚಂದ್ರಶೇಖರಗೆ ನ್ಯಾಯಾಂಗ ಬಂಧನ

ಮಹದಾಯಿಗಾಗಿ 2013ರಲ್ಲಿ ರೈಲು ತಡೆ ನಡೆಸಿ ಹೋರಾಟ

ಹುಬ್ಬಳ್ಳಿ : ಕಳಸಾ-ಬಂಡೂರಿ ನಾಲಾ ಜೋಡಣೆ, ಮಹದಾಯಿ ನದಿ ನೀರಿಗಾಗಿ 2013ರಲ್ಲಿ ನಡೆದ ಹೋರಾಟದಲ್ಲಿ ರೈಲು ತಡೆ ನಡೆಸಿದ್ದ ರೈತಪರ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ ಅವರಿಗೆ ಹುಬ್ಬಳ್ಳಿಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಸೋಮವಾರದಂದು ಆದೇಶ ಹೊರಡಿಸಿದೆ.

ರೈತಪರ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ರೈತರು 2013ರಲ್ಲಿ ಹುಬ್ಬಳ್ಳಿಯಲ್ಲಿ ಆರು ತಾಸು ರೈಲು ತಡೆದು ಪ್ರತಿಭಟನೆ ನಡೆಸಿದ್ದರು. ಮಹದಾಯಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ್ದರು.

ಈ ಹಿನ್ನೆಲೆಯಲ್ಲಿ ಆರ್​ಪಿಎಫ್ (ರೈಲ್ವೆ ರಕ್ಷಣಾ ದಳ) ಪೊಲೀಸರು ಸೋಮವಾರ ಬೆಳಗ್ಗೆ ಶಿರಸಿಯಲ್ಲಿ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ಬಂಧಿಸಿ, ಹುಬ್ಬಳ್ಳಿಗೆ ಕರೆತಂದಿದ್ದರು. ಕೋಡಿಹಳ್ಳಿ ಚಂದ್ರಶೇಖರ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶಿರಸಿಗೆ ಆಗಮಿಸಿದ್ದರು.

ಹುಬ್ಬಳ್ಳಿಯಲ್ಲಿ ವಿಚಾರಣೆ ನಡೆಸಿದ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಚಿನ ಕುಮಾರ ಶಿವಪೂಜೆ ಅವರು ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದರು.

ಈ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಅವರು ಜಾಮೀನಿಗೆ ಮನವಿ ಸಲ್ಲಿಸಿದ್ದು, ಆದರೆ ಜಾಮೀನು ನೀಡಲು ನಿರಾಕರಿಸಿದ ನ್ಯಾಯಾಧೀಶರು ಅಸಮಾಧಾನವನ್ನೂ ಹೊರಹಾಕಿದರು ಎನ್ನಲಾಗಿದೆ.

2019ರಲ್ಲಿ ನಡೆದ ವಿಚಾರಣೆಗೆ ನೀವು ಹಾಜರಾಗಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ ಅವರನ್ನು ತರಾಟೆ ತೆಗೆದುಕೊಂಡ ನ್ಯಾಯಾಧೀಶರು, ಹೋರಾಟಗಾರರನ್ನು ನ್ಯಾಯಾಲಯ ಗೌರವದಿಂದ ಕಾಣುತ್ತದೆ. ಹೋರಾಟಗಾರರು ಸಹ ನ್ಯಾಯಾಲಯಕ್ಕೆ ಗೌರವ ಕೊಡಬೇಕು ಎಂದರು ಎನ್ನಲಾಗಿದೆ. ಈಗ ಜಾಮೀನು ನೀಡಿದರೆ ಮತ್ತೆ 5 ವರ್ಷ ಕೋರ್ಟ್​ಗೆ ಹಾಜರಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ, ಮಹದಾಯಿ, ಕಳಸಾ-ಬಂಡೂರಿಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಹಾಗೂ ರೈತರ ಪರವಾಗಿ ಹೋರಾಟ ನಡೆಸಿದ್ದೆವು. ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.