ಕೆಎಂಸಿಆರ್‌ಐ KMCRI 
ಧಾರವಾಡ

KMCRI ಕೆಎಂಸಿಆರ್‌ಐ ವೈದ್ಯರ ಸಮಯಪ್ರಜ್ಞೆ 'ಮಹಿಳೆಗೆ ಪುನರ್ಜನ್ಮ'

ಹುಬ್ಬಳ್ಳಿ: ರಕ್ತಹೀನತೆ, ತಲೇಸೀಮಿಯಾ, ಹಿಮೋಗ್ಲೋಬಿನ್ ಕೊರತೆ... ಹೀಗೆ ಹತ್ತು ಹಲವು ಸಮಸ್ಯೆ ಹಿಡಿದುಕೊಂಡು ಆಸ್ಪತ್ರೆಗಳಿಗೆ ಅಲೆದಾಡಿದ್ದಳು ಮಹಿಳೆ. ಅದೂ ಒಬ್ಬಾಕೆಯಲ್ಲ, ಹೊಟ್ಟೆಯಲ್ಲಿ ಮೃತಪಟ್ಟ 7 ತಿಂಗಳ ಮಗು ಹೊತ್ತುಕೊಂಡು. ಕೊನೆಗೆ ಆಕೆ ಬಂದು ಚಿಕಿತ್ಸೆ ಪಡೆದಿದ್ದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯಲ್ಲಿ KMCRI (ಕೆಎಂಸಿಆರ್‌ಐ).
ಇದೀಗ ಒಂದು ತಿಂಗಳ ಯಶಸ್ವಿ ಚಿಕಿತ್ಸೆ ನಂತರ ಜೀವದಾನ ಪಡೆದು ನಿರ್ಗಮಿಸಿದ್ದಾರೆ. ಈಕೆಯ ಹೆಸರು ರೇಣುಕಾ (42). ವಿಜಯನಗರ ಜಿಲ್ಲೆಯ ಕಂಪ್ಲಿ ಸಮೀಪದ ಹಳ್ಳಿಯವಳು. ಮೊದಲು ಒಂದು ಗಂಡು ಮಗುವಿದೆ. ನಂತರ ಮೂರು ಬಾರಿ ಗರ್ಭಪಾತವಾಗಿದೆ. 5ನೇ ಬಾರಿ ಗರ್ಭ ಧರಿಸಿದಾಗ ಮಹಿಳೆ ನಡೆದಾಡಲು ಆಗದೆ ಬರೀ ಸುಸ್ತು ಎಂದು ಮಲಗುತ್ತಿದ್ದರು.
ಗಂಗಾವತಿ, ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅದಾದ ಬಳಿಕ ಬೆಂಗಳೂರಿನ ಒಂದು ಆಸ್ಪತ್ರೆಗೆ ಹೋಗಿ, ಮರಳಿ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಆ ಎಲ್ಲ ಆಸ್ಪತ್ರೆಗಳ ವೈದ್ಯರು ಹೇಳಿದ್ದು ತಾಯಿ ಮಗು ಬದುಕುವುದಿಲ್ಲ ಎಂದು. ಅದೂ ಹೋಗಲಿ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಲೂ ಹೋಗಿಲ್ಲ. ಕೊಪ್ಪಳದ ವೈದ್ಯರ ಸಲಹೆ ಮೇರೆಗೆ ಕೆಎಂಸಿಆರ್‌ಐಗೆ ಬಂದು ಏಪ್ರಿಲ್ ನಲ್ಲಿ ಅಡ್ಮಿಟ್ ಆಗಿದ್ದಾರೆ.
ಕಿಮ್ಸ್‌ನಲ್ಲಿ ಚಿಕಿತ್ಸೆ ಕೊಡಲು ಆರಂಭಿಸುವ ಮುನ್ನ ಹಲವು ತಪಾಸಣೆ ಮಾಡಿದ್ದಾರೆ. ರಕ್ತಹೀನತೆ ಸೇರಿ ಹಲವು ಸಮಸ್ಯೆ ಇರುವುದರ ಜತೆಗೆ ಹೊಟ್ಡೆಯಲ್ಲಿದ್ದ ಮಗುವೂ ಮೃತಪಟ್ಟಿರುವುದು ಗಮನಕ್ಕೆ ಬಂದಿತ್ತು. ಕೂಡಲೇ ತಾಯಿ ಮಗು ಆಸ್ಪತ್ರೆ ವಿಭಾಗದಲ್ಲಿ ಡಾ. ರಾಮಲಿಂಗಪ್ಪ ಅಂಟರತಾನಿ ನೇತೃತ್ವದ ತಂಡ ಕಾರ್ಯಪ್ರವೃತ್ತವಾಗಿದೆ.
ಇದನ್ನೂ ನಾರ್ಮಲ್ (ಸಹಜ) ಹೆರಿಗೆ ಮಾಡಿಸಿದ್ದಾರೆ. ನಾಲ್ಕು ವಾರಗಳ ಹಿಂದೆಯೇ ಮಗು ಮೃತಪಟ್ಟಿರುವುದು ತಾಯಿ ಗಮನಕ್ಕೂ ಬಂದಿರಲಿಲ್ಲ್ಲ. ಆಕೆಗೆ ಆಟೋ ಇಮ್ಯುನೋ ಹಿಮೊಲಿಕ್ ಅನಿಮಿಯಾ ಇದ್ದುದ್ದರಿಂದ ಬದುಕುಳಿಯುವುದು ಕಷ್ಟವಾಗಿತ್ತು. ಪರೀಕ್ಷೆಗಳ ಮೇಲೆ ಪರೀಕ್ಷೆ, ಚಿಕಿತ್ಸೆ, ಔಷಧೋಪಚಾರ, ವೈದ್ಯರ ತಂಡದ ನಿಗಾ ಆಕೆಗೆ ಜೀವದಾನ ನೀಡಿದೆ.

ಕಳೆದ ತಿಂಗಳು ಗರ್ಭಿಣಿಯೊಬ್ಬರು ಚಿಕಿತ್ಸೆ ಗೆ ದಾಖಲಾಗಿದ್ದರು. ಹಲವು ತಪಾಸಣೆ ಬಳಿಕ ಆಕೆಗೆ ಕೆಲವು ಕಾಯಿಲೆ ಇರುವುದು ದೃಢಪಟ್ಟಿತ್ತು. ಹೊಟ್ಟೆಯಲ್ಲಿ ಮೃತಪಟ್ಟಿದ್ದ ಮಗುವನ್ನು ಸಹಜ ಹೆರಿಗೆ ಮೂಲಕ ಹೊರ ತೆಗೆಯಲಾಯಿತು. ಆಟೋ ಇಮ್ಯುನೋ ಹಿಮೊಲಿಕ್ ಅನಿಮಿಯಾ ಅಪರೂಪದ ಸಮಸ್ಯೆ. ಇದು ಇದ್ದರೆ ತಾಯಿ ಮತ್ತು ಮಗು ಎರಡೂ ಬದುಕುಳಿಯುವುದು ಕಷ್ಟ. ಈಗ ರಕ್ತ ಹೀನತೆ ಸಮಸ್ಯೆ ಅಷ್ಟೇ ಇದೆ. ಅದಕ್ಕೂ ಔಷಧೋಪಚಾರದ ಪಟ್ಟಿ ಕೊಟ್ಟು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ.

> ಡಾ. ರಾಮಲಿಂಗಪ್ಪ ಅಂಟರತಾನಿ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕ