ಹುಬ್ಬಳ್ಳಿಯಲ್ಲಿ (keshavabalarama) ಶನಿವಾರ ಏರ್ಪಡಿಸಿದ್ದ ಕೇಶವ ನಮನ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಉತ್ತರ ಪ್ರಾಂತ ಪ್ರಚಾರಕ ನರೇಂದ್ರ ಮಾತನಾಡಿದರು.
ಹುಬ್ಬಳ್ಳಿ: ಲೋಕಹಿತ ಟ್ರಸ್ಟ್ ಹಾಗೂ ಸಂಸ್ಕಾರ ಭಾರತಿ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಕೇಶವ ನಮನ ಕಾರ್ಯಕ್ರಮ (keshavabalarama) ಹಾಗೂ ಶತ ಕಂಠ ಗಾಯನ (ನೂರು ಗಾಯಕರಿಂದ ರಾಷ್ಟ್ರ ಭಕ್ತಿ ಗೀತೆಗಳು) ಶನಿವಾರ ಏರ್ಪಡಿಸಲಾಗಿತ್ತು.
ಆರ್‌ಎಸ್‌ಎಸ್ ಉತ್ತರ ಪ್ರಾಂತ ಪ್ರಚಾರಕ ನರೇಂದ್ರ ಮಾತನಾಡಿ, ಸಂಘದ ಗಂಗೆಯನ್ನು ಭೂಮಿಗೆ ತಂದವರು ಡಾ. ಕೇಶವ ಬಲರಾಮ ಹೆಡಗೇವಾರ. ಅವರು ಜನ್ಮಜಾತ ದೇಶಭಕ್ತರು. ಹನ್ನೊಂದನೆಯ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದರೂ ದಾರಿ ತಪ್ಪಲಿಲ್ಲ. ಶಾಲೆಯ ದಿನಗಳಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ನಮ್ಮ ಗುಲಾಮಗಿರಿಗೆ ಕಾರಣ ಏನು? ಎಂದು ಚಿಂತಿಸಿದರು ಎಂದು ವಿವರಿಸಿದರು.
ನಮಗೆ ರಾಜಿ ಇಲ್ಲದ ದೇಶಭಕ್ತಿ ಬೇಕು. ದೇಶಭಕ್ತಿ ನಡವಳಿಕೆ ಆಗಬೇಕು. ಹಿಂದೂ ಸಂಘಟನೆ ಮಾಡುತ್ತೇನೆ ಎಂದಾಗ ಅನೇಕ ಜನರು ಅಪಹಾಸ್ಯ ಮಾಡಿದರು. ಅಪಹಾಸ್ಯ ಮತ್ತು ಸ್ವಂತಕ್ಕೆ ಚಿಂತಿಸದೆ ಸಂಘಟನೆಯಲ್ಲಿ ತೊಡಗಿದರು. ವಿಶ್ವದ ಅತಿದೊಡ್ಡ ಸಂಘಟನೆ ಆರ್‌ಎಸ್‌ಎಸ್ ಎಂದು ಎಲ್ಲರೂ ಹೇಳುತ್ತಾರೆ. ದೇಶದೆಲ್ಲೆಡೆ ಸಂಘವಿದೆ. ಇದರ ಹಿಂದೆ ಡಾ. ಕೇಶವ ಬಲರಾಮ ಹೆಡಗೇವಾರ ಅವರ ಪರಿಶ್ರಮವಿದೆ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರೂ ಅವರಲ್ಲಿ ಉತ್ಸಾಹ ಕುಂದಿರಲಿಲ್ಲ ಎಂದರಲ್ಲದೆ, ಇಂದು ಸಂಘವು ಸಮಾಜದ ಎಲ್ಲ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾರತ ಮಾತೆಯನ್ನು ಜಗನ್ಮಾತೆ ಮಾಡುವುದು ನಮ್ಮ ಉದ್ದೇಶ ಎಂದರು.
ನೂರು ಕಂಠದಿಂದ ದೇಶಭಕ್ತಿ ಗೀತಗಾಯನ, ನಂತರ ವಿದ್ವಾನ್ ಸುಜಯ ಶಾನಭಾಗ ತಂಡದಿಂದ ಸಂಘಾಂತರಂಗ ನೃತ್ಯ ರೂಪಕ, ಕೃಷ್ಣೇಂದ್ರ ವಾಡೇಕರ ಮತ್ತು ಗಾಯತ್ರಿ ದೇಶಪಾಂಡೆ ಅವರ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಜರುಗಿತು.
ಪ್ರಮುಖರಾದ ಶ್ರೀಧರ ನಾಡಿಗೇರ, ಮಾತಾ ತೇಜೋಮಯಿ, ಗೋವಿಂದಪ್ಪ ಗೌಡಪ್ಪಗೋಳ, ಸುಭಾಷಸಿಂಗ್ ಜಮಾದಾರ, ಬಾಲಚಂದ್ರ ನಾಕೋಡ, ಕಿರಣ ಗುಡ್ಡದಕೇರಿ, ಡಾ. ರಘು ಅಕಮಂಚಿ, ಶ್ರೀನಿವಾಸ, ದಿನೇಶ ವಾಘಮೋಡೆ ಇತರರು ಇದ್ದರು.