ಸಂದೀಪ ಬಿಡಸಾರಿಯಾ. 
ಧಾರವಾಡ

ಜಿಎಸ್​ಟಿ ಮಂಡಳಿ ಶಿಫಾರಸಿಗೆ ಕೆಸಿಸಿಐ ಸ್ವಾಗತ

ಕೈಗಾರಿಕೋದ್ಯಮ ವೇಗದ ಬೆಳವಣಿಗೆಗೆ ಪೂರಕ

ಹುಬ್ಬಳ್ಳಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಅಧ್ಯತೆಯಲ್ಲಿ ಜರುಗಿದ 57ನೇ ಜಿಎಸ್​ಟಿ ಮಂಡಳಿ ಸಭೆಯ ಶಿಫಾರಸುಗಳನ್ನು ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ (ಕೆಸಿಸಿಐ) ಸಂಸ್ಥೆಯು ಸ್ವಾಗತಿಸಿದೆ.

ಜಿಎಸ್​ಟಿ ಅನುಸರಣೆ ಪ್ರಕ್ರಿಯೆಯನ್ನು ಸರಳಗೊಳಿಸುವುದು, ತೆರಿಗೆ ಸಂಬಂಧಿತ ವ್ಯಾಜ್ಯಗಳನ್ನು ಕಡಿಮೆ ಮಾಡುವುದು ಹಾಗೂ ಉದ್ಯಮಗಳ ಕಾರ್ಯನಿರತ ಬಂಡವಾಳದ ಲಭ್ಯತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮಂಡಳಿಯು ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಂದೀಪ ಬಿಡಸಾರಿಯಾ ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್​ಟಿ ತೆರಿಗೆ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವುದು ಹಾಗೂ ವರ್ಷಕ್ಕೊಮ್ಮೆ ವಿಶೇಷ ಸಭೆಯಲ್ಲಿ ಅವುಗಳನ್ನು ಪರಿಶೀಲಿಸುವ ನಿರ್ಧಾರವು ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳಿಗೆ ತಮ್ಮ ವ್ಯವಹಾರಗಳ ಯೋಜನೆ ರೂಪಿಸಲು ಅಗತ್ಯ ಸ್ಥಿರತೆಯನ್ನು ಒದಗಿಸಲಿದೆ.

ಸಿಜಿಎಸ್​ಟಿ ಕಾಯ್ದೆಯ ಸೆನ್​ 69ರ ಅಡಿಯಲ್ಲಿ ಬಂಧಿಸುವ ಅಧಿಕಾರವನ್ನು ಕೈಬಿಡುವ ಹಾಗೂ ಪ್ರಾಸಿಕ್ಯೂಷನ್​ಗೆ ಸಂಬಂಧಿಸಿದ ಮಿತಿಯನ್ನು ಒಂದು ಕೋಟಿಯಿಂದ 5 ಕೋಟಿಗೆ ಹೆಚ್ಚಿಸುವ ಶಿಫಾರಸನ್ನು ಸ್ವಾಗತಿಸಿ, ಸಾಮಾನ್ಯ ದಂಡದ ಮೊತ್ತವನ್ನು 25ಸಾವಿರದಿಂದ 10ಸಾವಿರಕ್ಕೆ ಇಳಿಸುವುದು ಹಾಗೂ ಶೋಕಾಸ್​ ನೋಟಿಸ್​ಗಳನ್ನು ಜಾರಿಗೊಳಿಸುವಾಗ ಕನಿಷ್ಠ 10ಸಾವಿರ ಮೊತ್ತದ ಮಿತಿಯನ್ನು ನಿಗದಿಪಡಿಸುವ ಕ್ರಮವು ಸಣ್ಣ ಉದ್ಯಮಗಳಿಗೆ ಅನಗತ್ಯ ತೆರಿಗೆ ವ್ಯಾಜ್ಯಗಳಿಂದ ಪರಿಹಾರ ಒದಗಿಸಲಿದೆ.

ಸರಕು ಸಾಗಣೆ ವಾಹನಗಳನ್ನು ತಡೆದು ಪರಿಶೀಲಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಗುಪ್ತಚರ ಮಾಹಿತಿಯ ಆಧಾರದ ಮೇಲೆ ಮತ್ತು ಜಂಟಿ ಆಯುಕ್ತರ ಶ್ರೇಣಿಗಿಂತ ಕಡಿಮೆಯಲ್ಲದ ಅಧಿಕಾರಿಯ ಅನುಮತಿಯೊಂದಿಗೆ ಮಾತ್ರ ವಾಹನಗಳನ್ನು ತಡೆಹಿಡಿಯಬಹುದೆಂಬ ಸುರತಾ ಕ್ರಮವು ಸ್ವಾಗತಾರ್ಹ.

ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಅನುಕೂಲಕರವಾದ ಈ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಹಾಗೂ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರಿಗೆ ಬಿಡಸಾರಿಯಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಶಿಫಾರಸುಗಳ ಪ್ರಯೋಜನಗಳು ಉತ್ತರ ಕರ್ನಾಟಕದ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ವ್ಯಾಪಾರಸ್ಥರು ಹಾಗೂ ಕೈಗಾರಿಕೋದ್ಯಮಿಗಳಿಗೆ ತಲುಪುವಂತೆ ಸಂಬಂಧಿತ ಕಾಯ್ದೆ ತಿದ್ದುಪಡಿ, ನಿಯಮಗಳು ಮತ್ತು ಅಧಿಸೂಚನೆಗಳನ್ನು ಪ್ರಕಟಿಸಬೇಕೆಂದು ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.