ಹುಬ್ಬಳ್ಳಿ: ಕಲಾವಿದೆ ಸವಿತಾ ಆನಂದ ಬೆಣಗಿ ಅವರ ಚಿತ್ರಕಲೆಯ ಕೌದಿ ದರ್ಶನ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ನ. 15ರಿಂದ 25ರ ವರೆಗೆ ನಗರದ ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ ಎಂದು ಆರ್ಟ್ ಗ್ಯಾಲರಿ ಸಮಿತಿ ಅಧ್ಯಕ್ಷ ಆರ್.ಬಿ. ಗರಗ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 15ರಂದು ಬೆಳಗ್ಗೆ 11ಕ್ಕೆ ಎಂಎಲ್ಸಿ ಲಿಂಗರಾಜ ಪಾಟೀಲ ಪ್ರದರ್ಶನ ಉದ್ಘಾಟಿಸುವರು. ಜಾನಪದ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಗೇಟಿಯವರ ಅಧ್ಯಕ್ಷತೆ ವಹಿಸುವರು. ಡಾ. ಕಸ್ತೂರಿ ಡೋಣಿಮಠ, ಶೋಭಾ ಕರೆಣ್ಣವರ, ಎಫ್..ವಿ. ಚಿಕ್ಕಮಠ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಗ್ಯಾಲರಿಯಿಂದ ಇದು 17ನೇ ಚಿತ್ರಕಲಾ ಪ್ರದರ್ಶನವಾಗಿದೆ. ಕೌದಿ ದರ್ಶನದಲ್ಲಿ 60ಕ್ಕೂ ಹೆಚ್ಚು ಚಿತ್ರಕಲೆಗಳು ಪ್ರದರ್ಶನವಾಗಲಿವೆ. ನಿತ್ಯ ಬೆಳಗ್ಗೆ 10.30ರಿಂದ ಸಂಜೆ 5.30ರ ವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಇದ್ದು, ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕೆಂದು ಕೋರಿದರು.
ಸವಿತಾ ಬೆಣಗಿ ಅವರು ಮಾತನಾಡಿ, ನಮ್ಮ ಅಜ್ಜಿ ಕೌದಿಯನ್ನು ಕೈಯಿಂದಲೇ ಹೊಲಿಯುತ್ತಿದ್ದರು. ಅದರಿಂದ ನಾನು ಪ್ರಭಾವಿತಳಾಗಿದ್ದೇನೆ. ಇದೀಗ ನಾನು ಕೌದಿಯ ಚಿತ್ರ ಇರುವ ಚಿತ್ರಕಲೆಗೆ ಆದ್ಯತೆ ನೀಡಿದ್ದೇನೆ. ತಾಯಿ ಹಾಗೂ ಮಗುವಿನ ಕುರಿತು ಅನೇಕ ಚಿತ್ರಗಳನ್ನು ಬಿಡಿಸಿದ್ದೇನೆ. ನಮ್ಮ ಕಲೆ ಉಳಿಸಿಕೊಂಡು ಚಿತ್ರಕಲೆಯ ಪ್ರದರ್ಶನ ಮಾರಾಟದ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವೆ ಎಂದರು.
ಕಲಾವಿದ ಮಂಜುನಾಥ ಕರಿಗಾರ ಮಾತನಾಡಿ, ವಿದ್ಯಾನಗರ ಗುರುದತ್ತ ಭವನ ಎದುರಿನ ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿಗೆ ಮುಖ್ಯರಸ್ತೆಗೆ ಹೊಂದಿಕೊಂಡು ಗೇಟ್ ಅಳವಡಿಸಬೇಕು. ಸಾರ್ವಜನಿಕರಿಗೆ ಸುಲಭವಾಗಿ ಗ್ಯಾಲರಿಗೆ ಬರಲು ಅನುಕೂಲ ಮಾಡಿದರೆ ಕಲಾವಿದರ ಚಿತ್ರಕಲೆ ವೀಕ್ಷಣೆಗೆ ಅನುಕೂಲವಾಗಲಿದೆ. ಜತೆಗೆ ಕಾಯಂ ಚಿತ್ರಕಲೆ ಪ್ರದರ್ಶನ ಮಳಿಗೆ ಇಲ್ಲಿ ಆರಂಭಿಸಲು ಅನುಕೂಲವಾಗಬೇಕಿದೆ ಎಂದರು.
ಸುಮಂಗಲಾ, ವಸಂತ ಬಳ್ಳಾರಿ, ರಾಜು ಸೋನಾವನೆ ಇತರರು ಗೋಷ್ಠಿಯಲ್ಲಿದ್ದರು.