ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದಿಂದ ಪ್ರತಿಭಟನೆ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ೩೧೨ `ಡಿ' ಗ್ರೂಪ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಿಂಡಿಕೇಟ್ ಸಭೆಯಲ್ಲಿ ವಿಷಯ ಮಂಡಿಸಿ, ಕೂಡಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದವರು ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಫಾಯಿ ಕರ್ಮಚಾರಿ ತೀವ್ರ ಸಂಕಷ್ಟದಲ್ಲಿದ್ದು, ಆಯೋಗದ ಆದೇಶದಂತೆ ಪಾವತಿಸಬೇಕಾದ ೨೬.೯೦ ಲಕ್ಷ ರೂ. ಬಾಕಿ ಪಿಎಫ್ ಮೊತ್ತ ಅನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಪ್ರಸ್ತುತ ಬೆಳಗಿನ ಉಪಹಾರಕ್ಕಾಗಿ ನೀಡಲಾಗುತ್ತಿರುವ ೩೫ ರೂ. ಮೊತ್ತವನ್ನು ೫೦ ರೂ.ಗೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪರಿಷ್ಕೃತ ಕನಿಷ್ಠ ವೇತನ ನಿಯಮದಂತೆ ಪ್ರತಿ ತಿಂಗಳು ಕಾರ್ಮಿಕರಿಗೆ ೬,೦೭೦ ರೂ. ಹೆಚ್ಚುವರಿ ವೇತನ ಪಾವತಿಸಬೇಕು. ಕವಿವಿ ಸೇವೆಯಲ್ಲಿದ್ದಾಗ ನಿಧನರಾದ ಸಫಾಯಿ ಕರ್ಮಚಾರಿ ರಾಮಾಂಜನೇಯ ಪೋದಡ್ಡಿ ಅವರ ಮಗ ಜಗನ್ ರಾಮಾಂಜನೇಯ ಪೋದಡ್ಡಿ ಅವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬೇಕು ಹಾಗೂ ಮೃತರ ಪಿ.ಎಫ್ ಹಣವನ್ನು ಕುಟುಂಬಕ್ಕೆ ತಲುಪಿಸಬೇಕು ಎಂದು ಒತ್ತಾಯಿಸಿದರು.
ಆಯೋಗದ ಶಿಫಾರಸಿನಂತೆ ಗುರುತಿನ ಚೀಟಿ, ವೇತನ ಚೀಟಿ, ಸಮವಸ್ತç ಮತ್ತು ಎಂಪ್ಲಾಯ್‌ಮೆAಟ್ ಲೆಟರ್ ನೀಡಬೇಕು. ಮಹಿಳಾ ಪೌರಕಾರ್ಮಿಕರಿಗೆ ಹೆರಿಗೆ ಸೌಲಭ್ಯ ಕಾಯ್ದೆಯನ್ವಯ ೨,೫೦೦ ವೈದ್ಯಕೀಯ ಬೋನಸ್, ವರ್ಷಕ್ಕೆ ೨೧ ದಿನಗಳ ರಜೆ ಸಹಿತ ವೇತನ ಹಾಗೂ ಪ್ರತಿ ತಿಂಗಳು ೧ ದಿನದ ವೇತನ ಸಹಿತ ಮುಟ್ಟು ರಜೆ ಕಡ್ಡಾಯವಾಗಿ ಜಾರಿಗೊಳಿಸಬೇಕು. ವಿಶ್ವವಿದ್ಯಾಲಯವು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಗಂಗಯ್ಯ ಸಾಕೇನವರ, ಪವನ ಸಗಬಾಲ, ನರಸಿಂಹ ಮಾದರ, ಮಲ್ಲೇಶ ಚುಂಚಗೊಳ, ರಾಜು ಸಾಕೇ, ಬಾಳವ್ವ ಆನಿಗೋಳ, ಮಲ್ಲೇಶ ಚಿಂಚಗೋಳ, ಚಿಂತಮ್ಮ ಮಾದರ, ಸುನಂದ ಮಾದರ, ಪುಲ್ಲಣ್ಣ ನಾರಕ್ಕಣ್ಣರ, ಬಾಳವ್ವ ಆನಿಗೋಳ, ಸಂತೋಷ ಮುನೋಳಿ ಇದ್ದರು.