ಹುಬ್ಬಳ್ಳಿಯಲ್ಲಿ ಭಾನುವಾರ kanherimath swamiji ಕನ್ಹೇರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು.
- ಕನ್ಹೇರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿಕೆ
ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಮುಂಬರುವ ಏಪ್ರಿಲ್‌ನಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಲಾಗುವುದು
ಎಂದು ಕನ್ಹೇರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯುಪಿಎಸ್‌ಸಿ, ಕೆಪಿಎಸ್‌ಸಿ ಖಾಲಿ ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಹುದ್ದೆಗಳಿಗಾಗಿಯೇ ಸಾವಿರ ಯುವತಿಯರು, ಯುವಕರಿಗೆ ಈ ತರಬೇತಿಯನ್ನು ನೀಡಲಾಗುವುದು. ಇವರ ಆಯ್ಕೆಗೆ ಮುನ್ನ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಅಲ್ಲಿ ತೇರ್ಗಡೆಯಾದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುವುದು ಎಂದರು.
ಸುಸಜ್ಜಿತ ಕ್ಯಾಂಪಸ್ ನಿರ್ಮಿಸಿ ಅಲ್ಲಿ ತಜ್ಞರ ತಂಡ ತರಬೇತಿ ನೀಡಲಿದೆ. ಡಿಜಿಟಲ್ ಗ್ರಂಥಾಲಯ, ವೈಫೈ, ಆಧುನಿಕ ತಂತ್ರಜ್ಞಾನ ಆಧಾರಿತ ತರಬೇತಿ ಅಭ್ಯರ್ಥಿಗಳಿಗೆ ಸಿಗಲಿದೆ. ನ್ಯಾಯಾಲಯ, ಕಂದಾಯ, ಇಂಜಿನಿಯರ್, ಅಧಿಕಾರಿಗಳು ಸೇರಿದಂತೆ ವಿವಿಧ ಹುದ್ದೆಗಳನ್ನು ಈ ಭಾಗದವರು ಪಡೆಯುವಂತಾಗಬೇಕು ಎಂಬ ಸಂಕಲ್ಪ ನಮ್ಮದು ಎಂದರು.
ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಅವರು ತಮ್ಮ ಕೆಎಲ್‌ಇ ಸಂಸ್ಥೆಯಲ್ಲಿ ಜಾಗ ನೀಡುವುದಾಗಿ ಹೇಳಿದ್ದಾರೆ. ನಮ್ಮದೇ ಆದ ಸ್ವಂತ ಕಟ್ಟಡ ಆಗುವವರೆಗೆ ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ತರಬೇತಿ ಆರಂಭಿಸಲಾಗುವುದು. ಕಲಬುರ್ಗಿಯಲ್ಲಿಯೂ ಜಾಗ ಕೊಡುವುದಾಗಿ ಕೆಲವರು ಹೇಳಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಸಮಿತಿ ರಚಿಸಿ ಅಲ್ಲಿಯೂ ತರಬೇತಿ ನೀಡುವ ಸಂಕಲ್ಪ ಇದೆ. ಸದ್ಯ ಈ ಭಾಗದಲ್ಲಿ ತರಬೇತಿ ಸಂಸ್ಥೆ ತೆರೆಯಲಾಗುವುದು ಎಂದರು.
ಇಂಟಿಗ್ರೇಟೆಡ್ ಪದವಿ ಕಾಲೇಜ್ ತೆರೆಯುವ ಉದ್ದೇಶವಿದೆ. ಪಿಯುಸಿ ನಂತರ ಈ ಕಾಲೇಜ್‌ನಲ್ಲಿ ಓದುವ ಮಕ್ಕಳಿಗೆ ಪದವಿ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಕೊಡಲಾಗುವುದು. 100 ಎಕರೆ ಜಾಗ ತೆಗೆದುಕೊಂಡು ಅಲ್ಲಿ ಪದವಿ ಮತ್ತು ತರಬೇತಿ ಸೆಂಟರ್ ಮಾಡುವ ಉದ್ದೇಶವಿದೆ. ಬರೀ ಉತ್ತರ ಕರ್ನಾಟಕಕ್ಕೆ ಮಾತ್ರ ಇದು ಸೀಮಿತವಲ್ಲ. ಸಮಸ್ತ ಕರ್ನಾಟಕಕ್ಕೆ ಇದು ವಿಸ್ತರಿಸಲಿದೆ ಎಂದರು.
ಬೀದರ್ ಚಳಕಾಪುರದ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ಧರ್ಮ, ನೀತಿ, ದೇಶಪ್ರೇಮ ಆಧಾರಿತ ಶಿಕ್ಷಣ ಬೇಕು. ಈ ನಿಟ್ಟಿನಲ್ಲಿ ಯುವಕರನ್ನು ಕಾರ್ಯೋನ್ಮುಖಗೊಳಿಸಲು ಉದ್ದೇಶಿಸಲಾಗಿದೆ. ಬೆಳಗ್ಗೆ 14 ಜಿಲ್ಲೆಗಳಿಂದ 84 ಹಿರಿಯರು ಆಗಮಿಸಿದ್ದರು. ಈ ಸಂಸ್ಥೆ ಆರಂಭಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಹುಬ್ಬಳ್ಳಿಯಲ್ಲಿ ಸೆ. 13ರಂದು ಮತ್ತೊಮ್ಮ ನಮ್ಮ ಕಮಿಟಿ ಸಭೆ ನಡೆಸಲಿದೆ. ಅಲ್ಲಿ ಸಂಸ್ಥೆಯನ್ನು ಎಲ್ಲಿ ಮತ್ತು ಯಾವಾಗ ಆರಂಭಿಸಬೇಕು? ಸಂಸ್ಥೆಗೆ ಇಡುವ ಹೆಸರು ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಆರ್ಥಿಕವಾಗಿ ಹಿಂದುಳಿದವರನ್ನು ಪರಿಶೀಲಿಸಿ ನಮ್ಮ ತಂಡ ವರದಿ ಕೊಟ್ಟರೆ ಅಂಥವರಿಗೆ ಉಚಿತ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.
ವಿಜಯಪುರ ಜ್ಞಾನಯೋಗ ಆಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮಿಜಿ, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ರಮೇಶ ಕತ್ತಿ, ಗುರುಲಿಂಗಪ್ಪ ಅಂಗಡಿ, ವಿವಿಧ ಮಠಾಧೀಶರು ಸುದ್ದಿಗೋಷ್ಠಿಯಲ್ಲಿದ್ದರು.