ಕಲಘಟಗಿ ಪಟ್ಟಣದಲ್ಲಿ ಗ್ರಾಮದೇವಿಯರ ಜಾತ್ರಾ (Goddess Fair) ಮಹೋತ್ಸವದ 9ನೇ ದಿನ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗವ್ವ ದೇವಿಯರ ಶೋಭಾಯಾತ್ರೆ ಜರುಗಿತು. 
ಧಾರವಾಡ

Goddess Fair ಕಲಘಟಗಿ ಗ್ರಾಮದೇವಿಯರ ಜಾತ್ರೆಗೆ ತೆರೆ

ಕಲಘಟಗಿ: ಉತ್ತರ ಕರ್ನಾಟಕದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದಾದ ಕಲಘಟಗಿ ಗ್ರಾಮದೇವಿಯರ ಜಾತ್ರಾ ಮಹೋತ್ಸವ (Goddess Fair) 9ನೇ ದಿನದಂದು ವಿಜೃಂಭಣೆಯಿಂದ ದೇವಿಯರ ಶೋಭಾಯಾತ್ರೆ ಮೂಲಕ ಸಂಪನ್ನಗೊಂಡಿತು.
ಮೂರು ವರ್ಷಗಳಿಗೊಮ್ಮೆ ಜರುಗುವ ಕಲಘಟಗಿ ಗ್ರಾಮದೇವಿಯರ ಜಾತ್ರಾ ಮಹೋತ್ಸವದಲ್ಲಿ 9 ದಿನಗಳ ಕಾಲನಿತ್ಯ ಗ್ರಾಮದೇವಿಯರಾದ ಶ್ರೀ ದ್ಯಾಮವ್ವ ದೇವಿ ಹಾಗೂ ಶ್ರೀ ದುರ್ಗವ್ವ ದೇವಿಗೆ ಅಭಿಷೇಕ, ಪುಷ್ಪಾರ್ಚನೆ ಹಾಗೂ ಮಹಾ ಮಂಗಳಾರತಿ ಜರುಗಿದವು.
ಗುರುವಾರ ಸಂಜೆ 4 ಗಂಟೆಗೆ ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ತಾಲೂಕಿನ ಜೋಗಮ್ಮನವರು, ಮುತ್ತೈದೆಯರೆಲ್ಲರೂ ಸೇರಿಕೊಂಡು ಡೊಳ್ಳು ಕುಣಿತ, ಭಜನೆ ಸೇರಿದಂತೆ ವಿವಿಧ ವಾದ್ಯಮೇಳಗಳೊಂದಿಗೆ ದೇವಿಯರ ಶೋಭಾಯಾತ್ರೆ ಮೂಲಕ ಪಾದಗಟ್ಟಿ ತಲುಪುವುದರೊಂದಿಗೆ 9 ದಿನಗಳ ಅದ್ದೂರಿ ಜಾತ್ರೆಗೆ ತೆರೆ ಬಿದ್ದಿತು.
9ನೇ ದಿನವಾದ ಗುರುವಾರ ಬೆಳಗ್ಗೆಯಿಂದ ಜಾತ್ರೆಯ ಯಶಸ್ವಿಗೆ ಶ್ರಮಿಸಿದ, ಗ್ರಾಮದೇವಿ ದೇವಸ್ಥಾನದ ಟ್ರಸ್ಟ್ ಕಮಿಟಿಯವರು, ಅರ್ಚಕ ಮತ್ತು ಪುರೋಹಿತರು, ಜಾತ್ರಾ ಉತ್ಸವ ಸಮಿತಿ ಸದಸ್ಯರು, ಪಟ್ಟಣ ಪಂಚಾಯಿತಿ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ, ಪತ್ರಕರ್ತರು, ಯುವ ಮುಖಂಡರು, ವಿವಿಧ ಸಮಾಜದ ಗಣ್ಯರು, ಯುವಕ-ಯುವತಿಯರು, ಜಾನಪದ ಕಲಾ ತಂಡಗಳು, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ವಿವಿಧ ಸಂಘಟನೆಗಳು, ಮಹಿಳಾ ಮುಖಂಡರು, ಪ್ರಚಾರ ಸಮಿತಿ ಸದಸ್ಯರು, ಅನ್ನ ದಾಸೋಹಕ್ಕೆ ಶ್ರಮಿಸಿದ ಹಿರಿಯರು, ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ವಿವಿಧ ಜಾತ್ರೆ ಯಶಸ್ವಿಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.
ಜಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮೂಲಭೂತ ಸೌಲಭ್ಯ ಒದಗಿಸಲಾಗಿತ್ತು.