job fair ಕೆಜಿಪಿ ಫೌಂಡೇಷನ್ ಸದಸ್ಯ ರಾಜು ಪಾಟೀಲ ಮಾತನಾಡಿದರು. ವಿನಾಯಕ ಕಿತ್ತೂರ, ನಾಗರಾಜ ಸೋಗಿ ಗೋಷ್ಠಿಯಲ್ಲಿದ್ದರು.
- ಹುಬ್ಬಳ್ಳಿಯಲ್ಲಿ ಬೃಹತ್ ಉದ್ಯೋಗ ಮೇಳ
- ನೂರಕ್ಕೂ ಹೆಚ್ಚು ಕಂಪನಿಗಳು ಭಾಗಿ
- ಮೂರು ಸಾವಿರ ಉದ್ಯೋಗದ ಭರವಸೆ
ಹುಬ್ಬಳ್ಳಿ: job fair ಕೆಜಿಪಿ ಫೌಂಡೇಷನ್ ಅಧ್ಯಕ್ಷ ಶ್ರೀಗಂಧ ಶೇಟ್ ಅವರ ನೇತೃತ್ವದಲ್ಲಿ ಎರಡನೇ ಬಾರಿ ನಗರದಲ್ಲಿ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಮೇ 31ರಂದು ವಿದ್ಯಾನಗರದ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.
ಕಳೆದ ವರ್ಷ ಇದೇ ಸಮಯದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 70ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಉದ್ಯೋಗ ನೀಡಲಾಗಿತ್ತು ಎಂದು ಫೌಂಡೇಷನ್ ಸದಸ್ಯ ರಾಜು ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸ್ತುತ ವರ್ಷ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 100ಕ್ಕೂ ಹೆಚ್ಚು ಕಂಪನಿಗಳು ಆಗಮಿಸಿ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದು, 3 ಸಾವಿರ ಉದ್ಯೋಗ ಸಿಗುವ ಭರವಸೆ ಇದೆ ಎಂದರು.
ಅಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮೇಳ ನಡೆಯಲಿದೆ. ಬೆಳಗ್ಗೆ 10ಕ್ಕೆ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಕೆಎಲ್ಇ ನಿರ್ದೇಶಕ ಮಂಜುನಾಥ ಮುನವಳ್ಳಿ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಫೌಂಡೇಷನ್ ಅಧ್ಯಕ್ಷ ಶ್ರೀಗಂಧ ಶೇಟ್ ಅಧ್ಯಕ್ಷತೆ ವಹಿಸುವರು. ಎಸ್ಎಸ್ಎಲ್ಸಿ, ಪಿಯುಸಿ, ಯಾವುದೇ ಪದವಿ, ಐಟಿಐ, ಡಿಪ್ಲೋಮಾ, ಬಿಇ., ಎಂ.ಟೆಕ್, ಬಿ.ಇಡಿ, ಸ್ನಾತಕೋತ್ತರ ಪದವಿ, ಎಂಎಸ್ಸಿ ಶಿಕ್ಷಣ ಪಡೆದವರು ಮೇಳದಲ್ಲಿ ಭಾಗವಹಿಸಬಹುದು.
ಅಂಗವಿಕಲರೂ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಬಹುದು. ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳ ಝರಾಕ್ಸ್ ಪ್ರತಿ ಹಾಗೂ ಸ್ವವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗಿ ಉದ್ಯೋಗ ಪಡೆದುಕೊಳ್ಳಬಹುದು. ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು. ಫೌಂಡೇಷನ್ ನ ವಿನಾಯಕ ಕಿತ್ತೂರ, ನಾಗರಾಜ ಸೋಗಿ ಗೋಷ್ಠಿಯಲ್ಲಿದ್ದರು.