jgmmm hospital ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ (ಜೆಜಿಎಂಎಂಎಂ) ಮೆಡಿಕಲ್ ಕಾಲೇಜು ಹಾಗೂ ಹಾಸ್ಪಿಟಲ್.
- ಹುಬ್ಬಳ್ಳಿಯ ಗಬ್ಬೂರ ಬಳಿ ನಿರ್ಮಾಣವಾದ ಹಾಸ್ಪಿಟಲ್
- ಸಕಲ ಸವಲತ್ತುಗಳು ಸಾರ್ವಜನಿಕರಿಗೆ ಲಭ್ಯ
ಹುಬ್ಬಳ್ಳಿ: jgmmm hospital ಆರೋಗ್ಯ ಕ್ಷೇತ್ರದಲ್ಲಿ ದಶಕಗಳ ಅನುಭವ ಹೊಂದಿರುವ ಕೆಎಲ್ಇ ಸಂಸ್ಥೆಯು ಇದೀಗ ನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡುವ ಮೂಲಕ ಈ ಭಾಗದ ಜನರಿಗೆ ಸೇವೆ ನೀಡಲು ಸಜ್ಜಾಗಿದೆ.
ಕೆಎಲ್ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಕೆಎಎಚ್ಇಆರ್- ಕಾಹೆರ್) ಅಡಿಯಲ್ಲಿ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ (ಜೆಜಿಎಂಎಂಎಂ) ಮೆಡಿಕಲ್ ಕಾಲೇಜು ಹಾಗೂ ಹಾಸ್ಪಿಟಲ್ ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡು ಗಬ್ಬೂರ ಬಳಿ ಸ್ಥಾಪನೆಯಾಗಿದೆ.
ಈಗಾಗಲೇ ಸಾರ್ವಜನಿಕ ಸೇವೆಗಳಿಗೆ ತೆರೆದುಕೊಂಡಿರುವ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಸರ್ವ ಸೇವೆಗಳನ್ನು ಅಧಿಕೃತವಾಗಿ ಉದ್ಘಾಟಿಸಲಾಗುತ್ತಿದೆ. ಇದಕ್ಕಾಗಿ ವೇದಿಕೆ ಸಿದ್ಧಗೊಂಡಿದೆ.
ಕಾಹೆರ್ ಗುಣಮಟ್ಟದ ಆರೋಗ್ಯ, ವೃತ್ತಿಪರ ಶಿಕ್ಷಣವನ್ನು ನೀಡುವ ದೇಶದ ಪ್ರಮುಖ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ಇದರ ವ್ಯಾಪ್ತಿಯಲ್ಲಿ ಒಂಬತ್ತು ಕಾಲೇಜುಗಳಿವೆ. ಇದೀಗ ಕಾಹೆರ್ ಅಡಿಯಲ್ಲಿ ಹುಬ್ಬಳ್ಳಿಯ ಜೆಜಿಎಂಎಂಎಂ ಆರಂಭಗೊಂಡಿದೆ.
ಇದು ಕಾಹೆರ್ನ ಎರಡನೇ ವೈದ್ಯಕಿಯ ಕಾಲೇಜ್ ಆಗಿದ್ದು, ಬೆಳಗಾವಿಯ ಜವಾಹರಲಾಲ್ ನೆಹರು ವೈದ್ಯಕಿಯ ಕಾಲೇಜು ಮೊದಲನೆಯದಾಗಿದೆ. ಇದು ಐದು ದಶಕಗಳ ಸೇವಾ ಅನುಭವ ಹೊಂದಿದ್ದು, ಎಲ್ಲ ಪಿಜಿ ಮತ್ತು ಹೆಚ್ಚಿನ ಸೂಪರ್ ಸ್ಪೆಷಾಲಿಟಿ ಕೋರ್ಸ್ಗಳನ್ನು ಹೊಂದಿದೆ. ಇಲ್ಲಿ 2400 ಹಾಸಿಗೆಗಳ ಬೋಧನಾ ಆಸ್ಪತ್ರೆ ಇದೆ.
ಜೆಜಿಎಂಎಂಎಂ ಉತ್ತರ ಕರ್ನಾಟಕದ ಹುಬ್ಬಳ್ಳಿ ನಗರದ ಹೊರವಲಯದಲ್ಲಿ ಸ್ಥಾಪನೆಯಾಗಿದ್ದು, 1366 ಬೆಡ್, ಬೋಧನಾ ಆಸ್ಪತ್ರೆ, ಸಿಬ್ಬಂದಿ ಕ್ವಾಟರ್ಸ್ ಮತ್ತು ಹಾಸ್ಟೆಲ್ಗಳು, ಗ್ರಂಥಾಲಯ, ಸಭಾಂಗಣ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಅತ್ಯಾಧುನಿಕ ಸವಲತ್ತುಗಳನ್ನು ಹೊಂದಿರುವ ವೈದ್ಯಕಿಯ ಕಾಲೇಜ್ ಕ್ಯಾಂಪಸ್ ಆಗಿ ಹೊರಹೊಮ್ಮಿದೆ.
ತುರ್ತು ಚಿಕಿತ್ಸೆ ವಾರ್ಡ್ ಸ್ಥಾಪಿಸಲಾಗಿದೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವಿಭಾಗಗಳು, ಔಷಧಾಲಯ, ರಕ್ತ ಭಂಡಾರ, ಸಂಪೂರ್ಣ ಗಣಕೀಕೃತ ದಾಖಲೆ ಕೊಠಡಿ ಮುಂತಾದವುಗಳು ನಿರ್ಮಾಣವಾಗಿವೆ.
ಆರೋಗ್ಯ ಶಿಬಿರಗಳು
ಕೆಎಲ್ಇ ಜೆಜಿಎಂಎಂಎಂ ಕಾಲೇಜು ಹಾಗೂ ಆಸ್ಪತ್ರೆಯು 2022ರಿಂದಲೇ ಶೈಕ್ಷಣಿಕ ಅವಧಿ ಆರಂಭಿಸಿದ್ದು, ಅಂದಿನಿಂದಲೇ ಈ ಭಾಗದಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸಾರ್ವಜನಿಕ ಸೇವೆಗೆ ತೆರೆದುಕೊಂಡಿದೆ.
ಪ್ರತಿ ವರ್ಷ ಐದರಿಂದ 10 ಸಾವಿರ ಜನರು ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಹೆಚ್ಚಿನ ಚಿಕಿತ್ಸೆಗೆ ಗಬ್ಬೂರ ಬಳಿಯ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಹೊರರೋಗಿ ವಿಭಾಗಕ್ಕೂ ನಿತ್ಯ ಜನರು ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.