ಹುಬ್ಬಳ್ಳಿಯಲ್ಲಿ ಸಹಜ ಸಮೃದ್ಧ (Jack Fruit) ಸಂಸ್ಥೆಯ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಹಲಸು ಮೇಳದಲ್ಲಿ ಶುಕ್ರವಾರ ದೊಡ್ಡ ಗಾತ್ರದ ಹಲಸಿನ ಹಣ್ಣುಗಳು ಜನರ ಗಮನ ಸೆಳೆದವು. 
ಧಾರವಾಡ

ಮೂರು ದಿನಗಳ ಹಲಸು (Jack Fruit)ಮೇಳಕ್ಕೆ ಚಾಲನೆ

ಸಂತೋಷ ವೈದ್ಯ
ಹುಬ್ಬಳ್ಳಿ: ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್​ನಲ್ಲಿ (Jack Fruit)ಸಹಜ ಸಮೃದ್ಧ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಹಲಸು ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಉದ್ಘಾಟಿಸಿದ ಜನಸೇವಾ ಬ್ಯಾಂಕ್ ಮುಖ್ಯಸ್ಥ ಎ.ವಿ.ಸಂಕನೂರ ಮಾತನಾಡಿ, ಹಲಸು ಒಂದು ಪರಿಪೂರ್ಣ ಆಹಾರ ಎಂದರೆ ತಪ್ಪಾಗಲಿಕ್ಕಿಲ್ಲ. ಹಲಸಿನ ಹಣ್ಣನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ, ವಿಟಮಿನ್ ಸಿ ಅಂಶ ಹೆಚ್ಚಾಗುತ್ತದೆ. ಆದರೆ, ಗುಣಮಟ್ಟದ ಹಣ್ಣುಗಳ ಕೊರತೆ ಇದೆ. ಈ ನಿಟ್ಟಿನಲ್ಲಿ ಸಹಜ ಸಮೃದ್ಧ ಸಂಸ್ಥೆಯವರು ರೈತರ ಮತ್ತು ಗ್ರಾಹಕರ ಕೊಂಡಿಯಂತೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಹಜ ಸಂಮೃದ್ಧಿ ಸಂಸ್ಥೆಯ ಮುಖ್ಯಸ್ಥ ಮಲ್ಲಿಕಾರ್ಜುನ ಹೊಸಪಾಳ್ಯ ಮಾತನಾಡಿ, ಭಾರತ ಸೇರಿದಂತೆ ವಿದೇಶದ ಸುಮಾರು 12 ಬಗೆಯ ವಿವಿಧ ಹಲಸಿನ ತಳಿಗಳನ್ನು ಇಲ್ಲಿ ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಾಗಿದೆ. ಮೇಳದಲ್ಲಿ ಹಲಸು ಕೃಷಿಯ ಬಗ್ಗೆ ರೈತರಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ. ಸುಧಾರಿತ ಕೃಷಿ ತಂತ್ರಜ್ಞಾನ ಬಳಸಿಕೊಂಡು ಪೊದೆಯ ಗಾತ್ರದಲ್ಲಿ ಬೆಳೆಯುವ ಹಲಸಿನ ಮರಗಳನ್ನು ಬೆಳೆಸುವಂತೆ ಪ್ರೇರೇಪಿಸಲಾಗುತ್ತಿದೆ ಎಂದು ವಿವರಿಸಿದರು.
ಅರ್ಬನ್ ಓಯಾಸಿಸ್ ಮಾಲ್​ನ ವ್ಯವಸ್ಥಾಪಕ ರಮೇಶ ಇಂದೂರ, ದೇಸಿ ಬೀಜ ತಳಿಗಳ ಪೋಷಕಿ ಸೀಮಾ ಪ್ರಸಾದ, ಶರಣಗೌಡ ಬಿರಾದಾರ ಸೇರಿ ಅನೇಕರು ಇದ್ದರು.
12ಕ್ಕೂ ಹೆಚ್ಚು ಹಲಸಿನ ತಳಿ
ಜೂ.21ರ ವರೆಗೆ ನಡೆಯಲಿರುವ ಹಲಸು ಮೇಳದಲ್ಲಿ ಏಕಾದಶಿ, ಬಿಕ್ಕೆ, ಕಪ್ಪುಚುಕ್ಕೆ, ಸಕ್ಕರಾಯ ಪಟ್ಟಣ, ಗಮ್ೆಸ್, ಬೆಟ್ಟದ ಹಲಸು, ರುದ್ರಾಕ್ಷಿ, ಸೇರಿ 12ಕ್ಕೂ ಹೆಚ್ಚು ತಳಿಯ ಹಲಸಿನ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ. ಚಂದ್ರ ಹಲಸನ್ನು ಹೆಚ್ಚಿನ ಜನ ಖರೀದಿ ಮಾಡುತ್ತಿರುವುದು ಕಂಡು ಬಂತು. ವಿವಿಧ ಬಗೆಯ ತೋತಾಪುರಿ ಮಾವಿನ ಹಣ್ಣುಗಳು ಗ್ರಾಹಕರ ಗಮನ ಸೆಳೆದವು. ಸಾವಯವ ಬೀಜಗಳು, ಸಿರಿಧಾನ್ಯ ಆಹಾರ ಪದಾರ್ಥಗಳು, ಕುರುಕಲು ತಿಂಡಿಗಳು ಮಾರಾಟಕ್ಕೆ ಲಭ್ಯವಿವೆ.