ಬಿಜೆಪಿಯೇ ನನ್ನ (ishwarappa) ಉಸಿರು.
ಹುಬ್ಬಳ್ಳಿ: ನಾನು ಇರುವವರೆಗೂ ಬಿಜೆಪಿಯೇ ನನ್ನ ಉಸಿರು. ಅವರು ಕರೆದಾಗ ಮರಳಿ ಹೋಗುತ್ತೇನೆ. ಮರಳಿ ಕರೆಯುವ ವಿಶ್ವಾಸವಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ (ishwarappa) ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೂರು ಕಾರಣಕ್ಕೆ ಬಿಜೆಪಿಯಿಂದ ಹೊರಗೆ ಬಂದೆ. ಕುಟುಂಬ ರಾಜಕಾರಣ, ಸಾಮೂಹಿಕ ನೇತೃತ್ವ ಹಾಗೂ ಹಿಂದುತ್ವದ ಹೋರಾಟ ಇಲ್ಲವಾಗಿದೆ. ಈ ವಿಷಯದಲ್ಲಿ ಬಿಜೆಪಿ ಶುದ್ಧೀಕರಣವಾಗಬೇಕು. ನಮ್ಮ ನಾಯಕರು ಪಕ್ಷ ಶುದ್ಧೀಕರಣ ಮಾಡುವ ವಿಶ್ವಾಸವಿದೆ. ಇದಾದ ಬಳಿಕ ಬಿಜೆಪಿ ಹೈಕಮಾಂಡ್ ಕರೆದರೆ ಪಕ್ಷಕ್ಕೆ ಮರಳುತ್ತೇನೆ ಎಂದರು.
ಕೈ ಕಮಾಂಡ್ ಸತ್ತಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸಿದ್ದಾರೆ. ಇದನ್ನು ನೋಡುತ್ತ ಕಾಂಗ್ರೆಸ್ ಹೈಕಮಾಂಡ್ ಸುಮ್ಮನೆ ಕುಳಿತಿದೆ. ಪೂರ್ಣ ಬಹುಮತ ನೀಡಿದ ಜನರ ಬಗ್ಗೆ ಇವರಿಗೆ ಚಿಂತೆ ಇಲ್ಲ. ಹೈಕಮಾಂಡ್ ಬಾಯಿಯಲ್ಲಿ ಮೆಣಸಿನಕಾಯಿ ಇಟ್ಕೊಂಡಿದ್ದೀರಾ? ಎಂದು ಪ್ರಶ್ನೆ ಮಾಡಿದರಲ್ಲದೇ ಸತ್ತು ಹೋಗಿದೆ ಎಂದು ದೂರಿದರು.
ಮುಸ್ಲಿಮರು ಮತ್ತು ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಮಣೆ ಹಾಕುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಬಾಗಲಕೋಟೆಯಲ್ಲಿನ ಘಟನೆಯೇ ಇದಕ್ಕೆ ಸಾಕ್ಷಿ. ಆರ್‌ಎಸ್‌ಎಸ್ ಸ್ವಯಂ ಸೇವಕನನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು. ಹಿಂದೂಗಳು ಪ್ರತಿಭಟನೆ ನಡೆಸಿದ್ದರೆ ಮರಳಿ ಬಿಟ್ಟರು. ಮುಸ್ಲಿಮರು ಮತ್ತು ಪೊಲೀಸರು ಕಾಂಗ್ರೆಸ್ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದರು.
ಮುಂಬರುವ ಎಂಎಲ್‌ಎ ಚುನಾವಣೆಯಲ್ಲಿ ನಮ್ಮದು ಹಿಂದುತ್ವ ಅಜೆಂಡಾ. ಹಾಗಾಗಿಯೇ ಹಿಂದೂಗಳನ್ನು ಜಾಗೃತಗೊಳಿಸಲಾಗುತ್ತಿದೆ. ಹಿಂದುತ್ವದ ಆಧಾರದ ಮೇಲೆಯೇ ನಾವು ಅಧಿಕಾರಕ್ಕೆ ಬರುತ್ತೇವೆ. ನಮ್ಮ ಹಿಂದೂಗಳನ್ನು ನಾವೇ ಸಂರಕ್ಷಿಸುತ್ತೇವೆ ಎಂದರು.