ವಿವೇಕಾನಂದ ದಾಸನಕೊಪ್ಪ ಹುಬ್ಬಳ್ಳಿ
ಹವಾಮಾನ ಆಧಾರಿತ ಮಾವು ಬೆಳೆ ವಿಮೆ (Mango Insurance) ಬಿಡುಗಡೆಗೆ ತಾಂತ್ರಿಕ ಅಡಚಣೆ ಎದುರಾಗಿದ್ದು, ಧಾರವಾಡ ಜಿಲ್ಲೆಯ ಬೆಳೆಗಾರರು ವಿಮೆ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಪ್ರತಿ ವರ್ಷ ಜೂನ್ ಅಂತ್ಯದಿಂದ ಆ. 31ರೊಳಗೆ ಕಂತು ಪಾವತಿಸಿ ವಿಮೆ ಯೋಜನೆ ನೋಂದಾಯಿಸಲು ಅವಕಾಶ ಇರುತ್ತದೆ. ಅದರಂತೆ 2024-25ನೇ ಸಾಲಿನ ಮುಂಗಾರಿನಲ್ಲಿ ಧಾರವಾಡ ಜಿಲ್ಲೆಯ 8881 ರೈತರು 20775 ಎಕರೆ ಮಾವಿಗೆ ವಿಮೆ ಕಂತಾಗಿ 3.36 ಕೋಟಿ ರೂಪಾಯಿ ಪಾವತಿಸಿದ್ದಾರೆ. ಪ್ರತಿವರ್ಷ ಅಕ್ಟೋಬರ್ ಅಂತ್ಯ ಇಲ್ಲವೇ ನವೆಂಬರ್ ಮೊದಲ ವಾರದಲ್ಲಿ ವಿಮೆ ಮೊತ್ತ ರೈತರ ಖಾತೆಗೆ ಜಮೆ ಆಗುತ್ತಿತ್ತು. ಆದರೆ, ಈ ಬಾರಿ ವಿಳಂಬವಾಗಿದ್ದು, ರೈತರು ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ವಿಮೆ ಹಣಕ್ಕಾಗಿ ಅಲೆದಾಡುತ್ತಿದ್ದಾರೆ. ಆದರೆ, ಯಾವುದೇ ಮಾಹಿತಿ ದೊರೆಯದಾಗಿದೆ.
ಪ್ರತಿ ಗ್ರಾಮ ಪಂಚಾಯಿತಿಯನ್ನು ವಿಮಾ ಘಟಕವಾಗಿ ಪರಿಗಣಿಸಿ, ಹವಾಮಾನ ಆಧಾರಿತ ಮಾವು ಬೆಳೆ ವಿಮೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಹಾಗೂ ಹವಾಮಾನ ಮಾಹಿತಿ ಸಂಗ್ರಹಿಸುವ ಯಂತ್ರಗಳನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಸ್ಥಾಪಿಸಲಾಗಿದೆ. ಈ ಯಂತ್ರಗಳಲ್ಲಿ ದಾಖಲಾಗುವ ಮಳೆ, ಉಷ್ಣಾಂಶ, ಆರ್ದ್ರತೆ, ಮಂಜು, ಗಾಳಿಯ ವೇಗದ ದತ್ತಾಂಶವನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ತೋಟಗಾರಿಕೆ ಇಲಾಖೆಗೆ ನೀಡುತ್ತದೆ. ಈ ದತ್ತಾಂಶವನ್ನು ವಿಶ್ಲೇಷಣೆಗೊಳಪಡಿಸಿ, ಮಾವು ಬೆಳೆ ವಿಮೆಯ ಶೇಕಡಾವಾರು ಮೊತ್ತ ನಿರ್ಧರಿಸಲಾಗುತ್ತದೆ. ಆರ್ದ್ರತೆ, ಮಳೆ, ಗಾಳಿಯ ವೇಗ ಹೆಚ್ಚಿದಷ್ಟು ಕ್ಲೇಮ್ ಮೊತ್ತ ಅಧಿಕವಾಗುತ್ತದೆ.
ಈಗಾಗಲೇ ಗ್ರಾಪಂವಾರು ಮಾವಿನ ವಿಮೆಯ ಮೊತ್ತ ನಿರ್ಧಾರವಾಗಿತ್ತು. ಆದರೆ, ಹಣ ಜಮೆ ಮಾಡುವ ವೇಳೆಗೆ ಗ್ರಾಪಂ ವ್ಯಾಪ್ತಿಯ ಯಂತ್ರಗಳಲ್ಲಿ ದಾಖಲಾಗಿರುವ ಗಾಳಿಯ ವೇಗದ ಮಾಹಿತಿಗೆ ಸಂಬಂಧಿಸಿದಂತೆ ವಿಮಾ ಕಂಪನಿ ಆಕ್ಷೇಪ ಎತ್ತಿದೆ. ಯಂತ್ರದಲ್ಲಿ ಗಾಳಿಯ ವೇಗ 5.86 ಕಿಮೀ (ಪ್ರತಿ ಗಂಟೆಗೆ) ಎಂದು ದಾಖಲಾಗಿದ್ದನ್ನು 6 ಕಿಮೀ ಎಂದು, 5.43 ಕಿಮೀ ಎಂದು ದಾಖಲಾಗಿದ್ದನ್ನು 5 ಕಿಮೀ ಎಂದು ಸರಿದೂಗಿಸಿ ಮಾಹಿತಿ ನೀಡಲಾಗಿದೆ. ಇದಕ್ಕೆ ವಿಮಾ ಕಂಪನಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಕಾರಣದಿಂದಾಗಿ ವಿಮೆ ಬಿಡುಗಡೆಗೆ ಅಡ್ಡಿಯಾಗಿದೆ ಎನ್ನಲಾಗುತ್ತಿದೆ.
ತಾಲೂಕು
| ಅರ್ಜಿ ಸಂಖ್ಯೆ | ಎಕರೆ | ವಿಮೆ ಕಂತು
|
|---|
ಧಾರವಾಡ
| 5650
| 13141
| 2.12 ಕೋಟಿ ರೂ.
|
ಕಲಘಟಗಿ
| 1542
| 3680
| 59.56 ಲಕ್ಷ ರೂ.
|
ಅಳ್ನಾವರ
| 1178
| 2372
| 38.39 ಲಕ್ಷ ರೂ.
|
ಹುಬ್ಬಳ್ಳಿ ಗ್ರಾ.
| 289
| 907
| 14.69 ಲಕ್ಷ ರೂ.
|
ಹುಬ್ಬಳ್ಳಿ ನ
| 132
| 458
| 7.42 ಲಕ್ಷ ರೂ.
|
ಕುಂದಗೋಳ
| 90
| 214
| 3.47 ಲಕ್ಷ ರೂ.
|
ಹಾವೇರಿ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ರೈತರಿಗೆ ಈಗಾಗಲೇ ವಿಮೆ ಹಣ ಜಮೆಯಾಗಿದೆ. ಧಾರವಾಡ ಜಿಲ್ಲೆಗಷ್ಟೇ ವಿಳಂಬ ಮಾಡಲಾಗುತ್ತಿದೆ. ಅಧಿಕಾರಿಗಳನ್ನು ಕೇಳಿದರೆ, ತಾಂತ್ರಿಕ ಅಡಚಣೆಯಾಗಿದೆ ಎನ್ನುತ್ತಾರೆ. ವಿಮೆ ಕಂತು ಪಾವತಿಗೆ ಅಂತಿಮ ದಿನಾಂಕ ನಿಗದಿಪಡಿಸಿದಂತೆ, ವಿಮೆ ಮೊತ್ತ ಜಮೆಗೂ ನಿರ್ದಿಷ್ಟ ದಿನ ಗೊತ್ತುಪಡಿಸಬೇಕು. ವಿಮೆ ಕಂಪನಿಗಳ ಕಳ್ಳಾಟಕ್ಕೆ ಸರ್ಕಾರ ತಡೆ ಹಾಕಬೇಕು. ಶಾಸಕರು, ಸಂಸದರು ಈ ಕೂಡಲೇ ಗಮನಹರಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.
ಚನ್ನಪ್ಪ ಜಗದಪ್ಪನವರ, ರೈತ ಮುಖಂಡ, ಧಾರವಾಡ
ಗಾಳಿ ವೇಗದ ಕುರಿತಂತೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ನೀಡಿರುವ ಮಾಹಿತಿಗೆ ವಿಮೆ ಕಂಪನಿ ತಕರಾರು ಮಾಡಿದೆ. ಜಿಲ್ಲೆಯ ಮಾವು ವಿಮೆ ಬಿಡುಗಡೆ ವಿಳಂಬದ ಕುರಿತು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ತಿಂಗಳ ಅಂತ್ಯದೊಳಗೆ ವಿಮೆ ಬಿಡುಗಡೆಯಾಗಲಿದೆ.
ಕಾಶಿನಾಥ ಭದ್ರಣ್ಣವರ, ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ ಧಾರವಾಡ.