ಇಂದಿರಾ ಕ್ಯಾಂಟೀನ್ 
ಧಾರವಾಡ

ಇಂದಿರಾ ಕ್ಯಾಂಟೀನ್​ಗಳಿಗೆ ಬೆಲೆ ಏರಿಕೆ ಬಿಸಿ!

ಧಾರವಾಡ: ಬಡವರು, ಶ್ರಮಿಕರು ಹಾಗೂ ನಿರ್ಗತಿಕರ ಹಸಿವು ನೀಗಿಸುವುದಕ್ಕೆ ಅತ್ಯಂತ ಕಡಿಮೆ ದರದಲ್ಲಿ ಊಟ, ಉಪಾಹಾರ ಕಲ್ಪಿಸುತ್ತಿರುವ ಇಂದಿರಾ ಕ್ಯಾಂಟೀನ್​ಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ರಾಜ್ಯದಲ್ಲಿ 581ಕ್ಕೂ ಅಧಿಕ ಇಂದಿರಾ ಕ್ಯಾಂಟೀನ್​ಗಳು ಕಾರ್ಯ ನಿರ್ವಹಿಸುತ್ತಿವೆ. 2017ರಲ್ಲಿ ಆರಂಭವಾದ ಸಂದರ್ಭದಲ್ಲಿ ಕೇವಲ ಅನ್ನ-ಸಾಂಬಾರು, ಊಪಾಹಾರ ನೀಡಲಾಗುತ್ತಿತ್ತು. 2024ರ ಬಳಿಕ ಚಪಾತಿ, ರೊಟ್ಟಿ ಊಟದ ಮೆನು ಬಂದ ನಂತರ ಇಂದಿರಾ ಕ್ಯಾಂಟೀನ್​ಗಳಲ್ಲಿ ಊಟ ಸೇವಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಆದರೆ, ಈಚೆಗೆ ವಾಣಿಜ್ಯ ಸಿಲಿಂಡರ್​, ಅಕ್ಕಿ, ಇಡ್ಲಿ ರವೆ, ಉಪ್ಪಿಟ್ಟು ರವೆ, ಸಕ್ಕರೆ, ಅಡುಗೆ ಎಣ್ಣೆ, ಬೆಲ್ಲ, ತರಕಾರಿ ಸೇರಿ ಅನೇಕ ಸಾಮಗ್ರಿಗಳ ಬೆಲೆ ಹೆಚ್ಚಳವಾದ ಕಾರಣ ಟೆಂಡರ್​ ಪಡೆದಿರುವ ಗುತ್ತಿಗೆದಾರರು ಗುಣಮಟ್ಟದ ಆಹಾರ ಪೂರೈಸಲು ಕಷ್ಟಪಡುತ್ತಿದ್ದಾರೆ.
ಏನೇನು ದರ ಏರಿಕೆ?:
ಸದ್ಯ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಪಹಾರಕ್ಕೆ 5 ರೂ. ಹಾಗೂ ಊಟಕ್ಕೆ 10 ರೂ. ದರ ಇದೆ. ಮೆನು ಪ್ರಕಾರವೇ ವಾರವಿಡೀ ಅಡುಗೆ ತಯಾರಿಸಲಾಗುತ್ತಿದೆ. ಆದರೆ, 15 ದಿನಗಳಿಂದ ಇಡ್ಲಿ ರವೆ ಕೆಜಿಗೆ 40 ರೂ. ಇತ್ತು. ಪ್ರಸ್ತುತ 50 ರೂ. ಇದೆ. ವಾಣಿಜ್ಯ ಬಳಕೆಯ ಸಿಲಿಂಡರ್​ ಮೊದಲು 1,700 ರೂ. ಇತ್ತು. ಇದೀಗ 2,900 ರೂ. ಆಗಿದೆ. ಬುಲೆಟ್​ ರೈಸ್​ ಮೊದಲು 45 ರೂ. ಇತ್ತು. ಈಗ 75 ರೂ. ಇದೆ. ಅಡುಗೆ ಎಣ್ಣೆ 130 ರೂ. ಇತ್ತು. ಪ್ರಸ್ತುತ 145 ರೂ.ಗೆ ಏರಿದೆ. ಶೇಂಗಾ 70 ರೂ. ಇತ್ತು. ಈಗ 160 ರೂ. ಏರಿಕೆಯಾಗಿದೆ. ಹೀಗೆ ತೊಗರಿ ಬೇಳೆ, ಬೆಲ್ಲ, ತರಕಾರಿ ಸೇರಿ ನಾನಾ ದಿನಸಿ ಬೆಲೆಗಳು ಹೆಚ್ಚಾಗಿದ್ದರಿಂದ ಟೆಂಡರ್​ ಪಡೆದ ಏಜೆನ್ಸಿಗಳು ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ.
ಖರೀದಿಗೆ ಉದ್ರಿ ನೀಡುತ್ತಿಲ್ಲ:
ಇಂದಿರಾ ಕ್ಯಾಂಟೀನ್​ಗಳಿಗೆ ನಿತ್ಯ ದಿನಸಿ ತರಬೇಕು. ಆದರೆ, ಸುಮಾರು ಒಂದೂವರೆ ವರ್ಷದಿಂದ ಸರ್ಕಾರ ಹಾಗೂ ಮಹಾನಗರ ಪಾಲಿಕೆಯಿಂದ ಬಾಕಿ ಇರುವ ಅನುದಾನ ನೀಡಿಯೇ ಇಲ್ಲ. ಹಾಗಾಗಿ ಗುತ್ತಿಗೆದಾರರು ದಿನಸಿ ಅಂಗಡಿಗಳಿಗೆ ಸುಮಾರು ತಿಂಗಳ ಬಾಕಿ ಬಿಲ್​ ನೀಡಿಲ್ಲ. ಇದರಿಂದ ದಿನಸಿ ಅಂಗಡಿಯವರು ಉದ್ರಿ ನೀಡುತ್ತಿಲ್ಲ ಎಂದು ಇಂದಿರಾ ಕ್ಯಾಂಟೀನ್​ ನಿರ್ವಹಣೆ ಮಾಡುವರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಹೆಚ್ಚಿದ ಬೇಡಿಕೆ:
ನಿತ್ಯ ಬೆಳಗ್ಗೆ ಒಂದೊಂದು ಕ್ಯಾಂಟೀನ್​ಗಳಲ್ಲಿ 200ರಿಂದ 350 ಪ್ಲೇಟ್​ ಉಪಾಹಾರ-, ಊಟ ಮಾರಾಟವಾಗುತ್ತದೆ. ಆದರೆ, ಸರ್ಕಾರ ಬಾಕಿ ಅನುದಾನ ನೀಡಿದರೆ ಇನ್ನೂ ಚನ್ನಾಗಿ ಕ್ಯಾಂಟೀನ್​ ಸುಧಾರಿಸಲಾಗುವುದು ಎಂದು ವ್ಯವಸ್ಥಾಪಕರು ಹೇಳುತ್ತಾರೆ.
ಅಡುಗೆ ತಯಾರಿಸುವ ಸಾಮಗ್ರಿ ಹಳೇಯದಾಗಿವೆ
ಧಾರವಾಡ ನಗರದಲ್ಲಿ 2, ಹುಬ್ಬಳ್ಳಿ ನಗರದಲ್ಲಿ 9 ಇಂದಿರಾ ಕ್ಯಾಂಟೀನ್​ಗಳಿವೆ. ಕುಂದಗೋಳ, ನವಲಗುಂದ, ಕಲಟಗಿ, ಅಣ್ಣಿಗೇರಿ, ಅಳ್ನಾವರದಲ್ಲಿ ತಲಾ ಒಂದು ಕ್ಯಾಂಟೀನ್​ಗಳು ಕಾರ್ಯ ನಿರ್ವಹಿಸುತ್ತಿವೆ. 2017ರಲ್ಲಿ ಶುರುವಾದ ನಗರ ಪ್ರದೇಶದ ಇಂದಿರಾ ಕ್ಯಾಂಟೀನ್​ಗಳಲ್ಲಿ ಅಡುಗೆ ತಯಾರಿಸುವ ಸಾಮಗ್ರಿಗಳು ಬಹಳ ಹಳೇಯದಾಗಿವೆ. ಮೇಲಿಂದ ಮೇಲೆ ದುರಸ್ತಿಗೆ ಬರುತ್ತಿವೆ. ಹೊಸ ಸಾಮಗ್ರಿ ಕಲ್ಪಿಸುವಂತೆ ಗುತ್ತಿಗೆದಾರರು ಆಗ್ರಹಿಸುತ್ತಿದ್ದಾರೆ.
28 ರೂ. 75 ಪೈಸೆ ಸಬ್ಸಿಡಿ
ಸದ್ಯ ಇಂದಿರಾ ಕ್ಯಾಂಟೀನ್​ನಲ್ಲಿ ಒಂದು ಉಪಾಹಾರ, ಎರಡು ಊಟಕ್ಕೆ ಗ್ರಾಹಕರಿಂದ 25 ರೂ. ಗುತ್ತಿಗೆದಾರರು ಸ್ವೀಕರಿಸುತ್ತಿದ್ದಾರೆ. ಸರ್ಕಾರದಿಂದ ಅಂದರೆ ಮಹಾನಗರ ಪಾಲಿಕೆ ಹಾಗೂ ಪುರಸಭಾ ಆಡಳಿತ ನಿರ್ದೇಶನಾಲಯ (ಡಿಎಂಎ) ಜಂಟಿಯಾಗಿ 28 ರೂ. 75 ಪೈಸೆ ಸಬ್ಸಿಡಿ ನೀಡುತ್ತಿದೆ. ಸಬ್ಸಿಡಿ ದರ ಹೆಚ್ಚಿಸಬೇಕು ಎಂದು ಗುತ್ತಿಗೆದಾರರ ಆಗ್ರಹವಿದೆ.