ಕಲಘಟಗಿಯಲ್ಲಿ ಬುಧವಾರ ಸಂವಿಧಾನ (Constitution) ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಜರುಗಿತು. ಹಿರಿಯ ದಿವಾಣಿ ನ್ಯಾಯಾಧೀಶ ರವೀಂದ್ರ. ಎಲ್. ಹೊನೋಲೆ, ನ್ಯಾಯಾಧೀಶ ಸಂಜೀವಕುಮಾರ, ಹಿರಿಯ ವಕೀಲರಾದ ಎಸ್.ಟಿ.ತೆಗ್ಗಿಹಳ್ಳಿ ಗಿರೀಶ ನಾಯ್ಕ, ಅಣ್ಣಪ್ಪ ಓಲೇಕಾರ ಇತರರು ಇದ್ದರು.
ಕಲಘಟಗಿ: ಭಾರತದ ಸಂವಿಧಾನ (Constitution) ವಿಶ್ವದಲ್ಲೇ ಶ್ರೇಷ್ಠವಾಗಿದೆ. ಮೂಲಭೂತ ಹಕ್ಕುಗಳು ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ, ಅದೇ ರೀತಿ ಮೂಲಭೂತ ಕರ್ತವ್ಯಗಳನ್ನು ಕೂಡ ಸಂವಿಧಾನ ನೀಡಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರವೀಂದ್ರ. ಎಲ್. ಹೊನೋಲೆ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಸಂವಿಧಾನ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಭಾರತ ದೇಶವು ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ. ಪ್ರತಿಯೊಬ್ಬ ನಾಗರಿಕರಿಗೆ, ಸಂವಿಧಾನದ ಮಹತ್ವವನ್ನು ತಿಳಿಸಿಲು ಸಂವಿಧಾನ ದಿನಾಚರಣೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದರು.
ದಿವಾಣಿ ನ್ಯಾಯಾಧೀಶ ಸಂಜೀವಕುಮಾರ ಮಾತನಾಡಿ, ಭಗವದ್ಗೀತೆ, ಖುರಾನ್, ಬೈಬಲ್‌ನಂತೆ ಭಾರತದ ಸಂವಿಧಾನ ಗ್ರಂಥ ಕೂಡ ಪ್ರತಿ ಮನೆಯಲ್ಲಿ ಇರಬೇಕು. ಸಂವಿಧಾನವನ್ನು ಅಧ್ಯಯನ ಮಾಡಿ ಎಲ್ಲರೂ ಉತ್ತಮ ನಾಗರಿಕರಾಗಬೇಕು ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಗಿರೀಶ ನಾಯ್ಕ, ಶಶಿಕಲಾ ಶಿವಣ್ಣವರ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಅಣ್ಣಪ್ಪ ಓಲೇಕಾರ, ಹಿರಿಯ ವಕೀಲ ಎಸ್.ಟಿ. ತೆಗ್ಗಿಹಳ್ಳಿ , ಮಂಜುನಾಥ ಚೌಧರಿ, ಎಂ.ಎಂ. ಚಲವಾದಿ, ಬಿ.ಟಿ. ಧರ್ಮೋಜಿ, ವೈ.ಎಂ. ಹೊಸಮನಿ, ರವಿ ತೋಟಗಂಟಿ ಸೇರಿದಂತೆ ವಕೀಲರ ಸಂಘದ ಸದಸ್ಯರು, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯರು ಇದ್ದರು.