Bio fuel ಹುಬ್ಬಳ್ಳಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸುಸ್ಥಿರ ಜೈವಿಕ ಇಂಧನ ತಂತ್ರಜ್ಞಾನಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಟ್ರೂಆಲ್ಟ್​ ಬಯೋಎನರ್ಜಿ ಸಂಸ್ಥಾಪಕ ವಿಜಯ ನಿರಾಣಿ, ರಾಮಕೃಷ್ಣ ವೈ.ಬಿ., ಆರ್​.ವಿ. ವಟ್ನಾಳ್​, ಪ್ರೊ. ಆನಂದ ಹಲಗೇರಿ, ಪ್ರೊ. ಸೀಮಾ ಪರೋಹ, ಪ್ರೊ. ಜಾಬಿನ್​ ಬಾಗೇವಾಡಿ ಇತರರು ಇದ್ದರು. 
ಧಾರವಾಡ

Bio fuel ಜೈವಿಕ ಇಂಧನದಲ್ಲಿ ಭಾರತದ ಅಗಾಧ ಸಾಧನೆ

ಪ್ರಮುಖ ಮುಖ್ಯಾಂಶಗಳು

  • ಟ್ರೂಆಲ್ಟ್​ ಬಯೋಎನರ್ಜಿ ಸಂಸ್ಥಾಪಕ ವಿಜಯ ನಿರಾಣಿ ಅಭಿಮತ
  • ಕೆಎಲ್​ಇ ತಾಂತ್ರಿಕ ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್​ ಆಫ್​ ಅಡ್ವಾನ್ಸ್​ಡ ಸೈನ್ಸಸ್​ ಕಾರ್ಯಕ್ರಮ ಆಯೋಜಿಸಿತ್ತು. ಶಿಕ್ಷಣ ತಜ್ಞರು, ಉದ್ಯಮ ತಜ್ಞರು, ನೀತಿ ನಿರೂಪಕರು ಮತ್ತು ಸಂಶೋಧನಾ ವಿದ್ವಾಂಸರು ಸಕ್ರಿಯವಾಗಿ ಭಾಗವಹಿಸಿದರು.
ವಿಚಾರ ಸಂಕಿರಣ ಉದ್ಘಾಟಿಸಿದ ಟ್ರೂಆಲ್ಟ್​ ಬಯೋ ಎನರ್ಜಿ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಜಯ ನಿರಾಣಿ, ಜೈವಿಕ ಇಂಧನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತವು ಅಗಾಧ ಬೆಳವಣಿಗೆ ಹೊಂದುವ ಸಾಮರ್ಥ್ಯ ಹೊಂದಿದೆ. ಭಾರತವು ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಹೊಂದಿದ ಹಾಗೂ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ. ಇದು ನಾವೀನ್ಯತೆ- ಚಾಲಿತ ಬೆಳವಣಿಗೆಗೆ ಅದ್ಭುತ ಅವಕಾಶಗಳನ್ನು ಒದಗಿಸಿ ಕೊಡಲಿದೆ ಎಂದರು.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜೈವಿಕ ಇಂಧನಗಳ ಕಾರ್ಯನಿರತ ತಂಡದ ಸದಸ್ಯ ರಾಮಕೃಷ್ಣ ವೈ.ಬಿ. ಮಾತನಾಡಿ, ಎಥೆನಾಲ್​ ಮಿಶ್ರಣ ಮತ್ತು ರಾಷ್ಟ್ರೀಯ ಜೈವಿಕ ಡೀಸೆಲ್​ ಮಿಷನ್​ ನಂತಹ ಪ್ರಮುಖ ರಾಷ್ಟ್ರೀಯ ಉಪಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು. ಜೈವಿಕ ಆಧಾರಿತ ತಂತ್ರಜ್ಞಾನಗಳನ್ನು ಜೈವಿಕ ವಸ್ತುಗಳು, ಜೀವರಾಸಾಯನಿಕಗಳು ಮತ್ತು ಜೈವಿಕ ಔಷಧೀಯ ವಸ್ತುಗಳಾಗಿ ವಿಸ್ತರಿಸುವ ಅಗತ್ಯವನ್ನು ಅವರು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆಯ ನಿರಾಣಿ ಗ್ರೂಪ್​ ಆಫ್​ ಇಂಡಸ್ಟ್ರೀಸ್​ ತಾಂತ್ರಿಕ ಸಲಹೆಗಾರ ಆರ್​.ವಿ. ವಟ್ನಾಳ್​ ಮಾತನಾಡಿದರು. ಬೆಂಗಳೂರಿನ ಪೂರ್ಣಪ್ರಜ್ಞಾ ಇನ್​ಸ್ಟಿಟ್ಯೂಟ್​ ಆಫ್​ ಸೈಂಟಿಫಿಕ್​ ರಿಸರ್ಚ್​ನ ಪ್ರೊ. ಆನಂದ ಹಲಗೇರಿ, ಕಾನ್ಪುರದ ರಾಷ್ಟ್ರೀಯ ಸಕ್ಕರೆ ಸಂಸ್ಥೆಯ ನಿರ್ದೇಶಕಿ ಪ್ರೊ. ಸೀಮಾ ಪರೋಹ ಅತಿಥಿಯಾಗಿದ್ದರು. ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ. ಜಾಬಿನ್​ ಬಾಗೇವಾಡಿ ಕಾರ್ಯಕ್ರಮ ಸಂಯೋಜಿಸಿದ್ದರು.

ಸಮಾರೋಪ:

ಮೂರು ದಿನಗಳು ನಡೆದ ರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ಮಾಜಿ ನಿರ್ದೇಶಕ ಪ್ರೊ. ಎಸ್​.ಎಂ. ಶಿವಪ್ರಸಾದ್​ ಮಾತನಾಡಿ, ಇಂತಹ ಸಮ್ಮೇಳನಗಳು ವೈಜ್ಞಾನಿಕ ಸಂಶೋಧನೆಯನ್ನು ಮುಂದುವರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಂಶೋಧಕರು ಮತ್ತು ನೀತಿ ನಿರೂಪಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.
ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಪ್ರಕಾಶ ತೆವರಿ, ಸಂಶೋಧನಾ ನಿರ್ದೇಶಕ ಪ್ರೊ. ತೇಜರಾಜ್​ ಅಮಿನಭಾವಿ, ಕುಲಸಚಿವ ಪ್ರೊ. ಬಿ.ಎಸ್​. ಅನಾಮಿ, ಐಸಿಸಿ ಅಧ್ಯಕ್ಷ ಪ್ರೊ. ರಂಜಿತ್​ ವಮಾರ್, ಪ್ರೊ. ರಾಜೇಶ್​ ಧಾಕರೆ, ಪ್ರೊ. ಮನೋಜ್​ ಕುಮಾರ್​ ರಾವತ್​ ಮತ್ತು ಪ್ರೊ. ಎಸ್​.ಸಿ. ಗೋಯಲ್​ ಉಪಸ್ಥಿತರಿದ್ದರು.