ಶಿವಕೃಪಾ ನೂತನ ಕಾರ್ಯಾಲಯದ ಲೋಕಾರ್ಪಣಾ ಸಮಾರಂಭದಲ್ಲಿ ಮಂಗೇಶ ಭೇಂಡೆ ಮಾತನಾಡಿದರು. 
ಧಾರವಾಡ

ಶಿವಕೃಪಾ ಹೊಸ ಕಚೇರಿಯ ಉದ್ಘಾಟನೆ

ಧಾರವಾಡ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಲವಾರು ಪ್ರಚಾರಕರು ಕಾರ್ಯಾಲಯ ಮತ್ತು ವ್ಯವಸ್ಥೆಗಳು ಇಲ್ಲದೆ ಕೆಲಸ ಮಾಡಿದ್ದಾರೆ. ಧಾರವಾಡದಲ್ಲಿ ಸುಸಜ್ಜಿತ ಕಾರ್ಯಾಲಯ ನಿರ್ಮಾಣವಾಗಿದ್ದು, ಇದು ಸಾಮಾಜಿಕ ಪರಿವರ್ತನೆಗಾಗಿ ಕೆಲಸ ಮಾಡುವವರಿಗೆ ಶಕ್ತಿಕೇಂದ್ರವಾಗಲಿ. "ಶಿವಕೃಪಾ' ಕಾರ್ಯಾಲಯ ಸಂಘದ ಕಾರ್ಯಗಳ ಆಲಯವಾಗಲಿ ಎಂದು ಆರ್​ಎಸ್​ಎಸ್​ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಇಲ್ಲಿನ ರಾಮನಗರದಲ್ಲಿ ನಿರ್ಮಿಸಿದ ಆರ್​ಎಸ್​ಎಸ್​ನ "ಶಿವಕೃಪಾ' ನೂತನ ಕಾರ್ಯಾಲಯದ ಲೋಕಾರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಘದ ಮೊದಲ ಕಾರ್ಯಾಲಯ ಮಂಗಳವಾರಪೇಟೆಯಲ್ಲಿತ್ತು. ರಾಮನಗರದಲ್ಲಿ ಹಳೆಯ ಕಟ್ಟಡ ಖರೀದಿಸಿ ಸುಸಜ್ಜಿತ ಕಟ್ಟಡ ತಲೆಎತ್ತಿದೆ. ಸಂಘದ ಕಾರ್ಯಾಲಯ ಕೇವಲ ಪ್ರಚಾರಕರಿಗಲ್ಲ. ಸಂಘದ ಕಾರ್ಯಗಳ ಬೆಳವಣಿಗೆಗಾಗಿ ಇದು ಪೂರಕವಾಗಬೇಕು. ಸಂಘಕ್ಕೆ 100 ವರ್ಷ ಸಂದ ಸುಸಂದರ್ಭದಲ್ಲಿ ಕಾರ್ಯಾಲಯ ಲೋಕಾರ್ಪಣೆಗೊಂಡಿದ್ದು ಸಂತಸದ ಸಂಗತಿ. ಇದು ಪ್ರೇರಣಾ ಕೇಂದ್ರವಾಗಿ ವಿಕಸಿತಗೊಳ್ಳಬೇಕು ಎಂದರು.
ನಮ್ಮಲ್ಲಿ ಸಜ್ಜನರ ಕೊರತೆ ಇಲ್ಲ. ಆದರೆ, ಸಜ್ಜನರು ನಿಷ್ಕ್ರಿಯವಾಗಿರುವುದು ದುರ್ದೈವದ ಸಂಗತಿ. ಸ್ವಾತಂತ್ರ್ಯ ಪಡೆದು 78 ವರ್ಷಗಳಾದರೂ ಗುಲಾಮಗಿರಿ ಮನಸ್ಥಿತಿ ದೂರವಾಗಿಲ್ಲ. ಮಾತೃಭಾಷೆಯ ಮೇಲೆ ಅಭಿಮಾನ ಇರಬೇಕು. ಪ್ರತಿಯೊಬ್ಬರೂ ತಮ್ಮ ಪಾಲಿನ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದರು.
ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಜಿಲ್ಲಾ ಸಂಚಾಲಕ ಡಾ. ವೇದವ್ಯಾಸ ದೇಶಪಾಂಡೆ, ಉತ್ತರ ಪ್ರಾಂತ ಪ್ರಚಾರಕ ಬಸವರಾಜ ಡಂಬಳ ವೇದಿಕೆಯಲ್ಲಿದ್ದರು. ವೆಂಕಟೇಶ ಕರಿಕಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕೃಪಾ ಟ್ರಸ್ಟ್​ ಅಧ್ಯಕ್ಷ ಅಮರ ಟಿಕಾರೆ ವಂದಿಸಿದರು.