ಹುಬ್ಬಳ್ಳಿ ತಾಲೂಕಿನ ಇನಾಂವೀರಾಪೂರ (inamveerapura) ಗ್ರಾಮದ ವಿವೇಕಾನಂದ ದೊಡ್ಡಮನಿ ನಿವಾಸಕ್ಕೆ ಗುರುವಾರ ತೆರಳಿದ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಅವರು ಕುಟುಂಬದವರೊಂದಿಗೆ ಚರ್ಚಿಸಿ, ಸಾಂತ್ವನ ಹೇಳಿದರು.
ಹುಬ್ಬಳ್ಳಿ: ಮುಂಬರುವ ಅಧಿವೇಶನದಲ್ಲಿ ಮರ್ಯಾದೆ ಹತ್ಯೆ (inamveerapura) ತಡೆಗೆ ಕಠಿಣ ಕಾನೂನು ಜಾರಿಗೆ ತರಲು ಪರಿಶೀಲಿಸಲಾಗುವುದು. ಅಲ್ಲದೇ ಮಾನ್ಯ ಹೆಸರಿನಲ್ಲಿ ಕಾಯ್ದೆ ರೂಪಿಸುವ ಕುರಿತು ಚರ್ಚಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ತಿಳಿಸಿದರು.
ತಾಲೂಕಿನ ಇನಾಂವೀರಾಪೂರ ಗ್ರಾಮದ ವಿವೇಕಾನಂದ ದೊಡ್ಡಮನಿ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಗುರುವಾರ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹತ್ಯೆಯನ್ನು ಸರ್ಕಾರವು ತೀವ್ರವಾಗಿ ಖಂಡಿಸಿದೆ. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ, ಉತ್ತೇಜನ ಕೊಟ್ಟಿದ್ದಾರೋ ಅವರನ್ನು ಬಿಡುವುದಿಲ್ಲ. ಸಮಾಜ ಕಲ್ಯಾಣ ಇಲಾಖೆ ವೈಫಲ್ಯದ ಆರೋಪ ಕುರಿತು ತನಿಖೆ ನಡೆಸಲಾಗುವುದು. ತನಿಖಾ ವರದಿ ಬಂದ ಬಳಿಕ ತಪ್ಪು ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಅಲ್ಲದೆ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಇದು ಮರ್ಯಾದೆ ಹತ್ಯೆಯಲ್ಲ, ಉಗ್ರವಾದ ಕೊಲೆ. ಇದು ನಮ್ಮ ರಾಜ್ಯದಲ್ಲಿ ಕಂಡುಬಂದಿರಲಿಲ್ಲ. ರಾಜಸ್ತಾನ, ಹರಿಯಾಣ ಸೇರಿ ಇತರ ರಾಜ್ಯದಲ್ಲಿ ಕಂಡುಬಂದಿತ್ತು. ನಮ್ಮ ಕರ್ನಾಟಕ ಮುಂದುವರಿದ ರಾಜ್ಯ. ಪ್ರಾಯಕ್ಕೆ ಬಂದ ಯುವತಿಯು ತನ್ನ ಮದುವೆಯ ಆಯ್ಕೆ ಸ್ವಾತಂತ್ರ್ಯ ಹೊಂದಿದ್ದಾಳೆ ಎಂದರು.