ಇನಾಂವೀರಾಪೂರ (inamveerapura) ಗ್ರಾಮದ ಹಲ್ಲೆಗೊಳಗಾದ ವಿವೇಕಾನಂದ ದೊಡ್ಡಮನಿ ನಿವಾಸಕ್ಕೆ ಬುಧವಾರ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಹುಬ್ಬಳ್ಳಿ: ಇನಾಂವೀರಾಪೂರ (inamveerapura) ಗ್ರಾಮದಲ್ಲಿ ನಡೆದಿರುವ ಗರ್ಭಿಣಿ ಹತ್ಯೆ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸುವ ಕುರಿತು ಮುಖ್ಯಮಂತ್ರಿಗಳ ಜತೆಗೆ ಚರ್ಚಿಸುತ್ತೇವೆ. ಮರ್ಯಾದೆ ಹತ್ಯೆ ತಡೆಗೆ ಪ್ರತ್ಯೇಕ ಕಾನೂನು ಜಾರಿ ಅಗತ್ಯವಿಲ್ಲ. ಈಗಾಗಲೆ ಕಾನೂನುಗಳು ಜಾರಿಯಲ್ಲಿವೆ. ಒಂದು ವೇಳೆ ರಾಜ್ಯದಲ್ಲಿ ಈ ಕಾನೂನಿನಲ್ಲಿ ಲೋಪ-ದೋಷಗಳಿದ್ದರೆ ಅದಕ್ಕೆ ರಾಜ್ಯಮಟ್ಟದಲ್ಲಿ ತಿದ್ದುಪಡಿ ತರುವುದು ಮತ್ತು ಹೊಸ ಕಾನೂನು ಜಾರಿ ಕುರಿತು ಪರಿಶೀಲಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಭರವಸೆ ನೀಡಿದರು.
ತಾಲೂಕಿನ ಇನಾಂವೀರಾಪೂರ ಗ್ರಾಮದ ಹಲ್ಲೆಗೊಳಗಾದ ವಿವೇಕಾನಂದ ದೊಡ್ಡಮನಿ ನಿವಾಸಕ್ಕೆ ಬುಧವಾರ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇನಾಂ ವೀರಾಪುರದಲ್ಲಿ ನಡೆದ ಮರ್ಯಾದಾ ಹತ್ಯೆ ತೀವ್ರ ಖಂಡನೀಯ. ಇದನ್ನು ರಾಜ್ಯ ಸರ್ಕಾರ ಬಲವಾಗಿ ಖಂಡಿಸುತ್ತದೆ. ಸಂತ್ರಸ್ತರೊಂದಿಗೆ ಮಾತನಾಡುವಾಗ ಅವರು ಹಲವು ಬೇಡಿಕೆ ಇಟ್ಟಿದ್ದಾರೆ. ವಿವೇಕಾನಂದ ಅವರಿಗೆ ಸರ್ಕಾರಿ ನೌಕರಿ ಮತ್ತು ಮನೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಗಳ ಜತೆಗೆ ಚರ್ಚಿಸಲಾಗುವುದು ಎಂದರು.