ಧಾರವಾಡ ಮಾಳಮಡ್ಡಿಯ ಕೆ.ಇ.ಬೋರ್ಡ್ ಶಾಲೆ ಆವರಣದಲ್ಲಿ ಹಿಂದೂ ಸಮ್ಮೇಳನ
ಧಾರವಾಡ: ಹಿಂದೂ ಧರ್ಮ ಶಾಂತಿ ಬಯಸುತ್ತದೆ. ಆದರೆ, ಅಧರ್ಮ ಸಹಿಸುವುದಿಲ್ಲ. ನಾವು ಅನ್ಯ ಧರ್ಮೀಯರನ್ನು ದ್ವೇಷಿಸುವುದಿಲ್ಲ. ಆದರೆ, ನಮ್ಮ ಧರ್ಮದ ಮೇಲೆಯೇ ಪ್ರಹಾರವಾದಾಗ ಸುಮ್ಮನವಾಗಿ ಕೂರವುದು ವೀರತ್ವವೂ ಸಹ ಅಲ್ಲ ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದ ಹೇಳಿದರು.
ನಗರದ ಮಾಳಮಡ್ಡಿಯ ಕೆ.ಇ.ಬೋರ್ಡ್ ಶಾಲೆ ಆವರಣದಲ್ಲಿ ಭಾನವಾರ ಆಯೋಜಿಸಿದ್ದ ಹಿಂದೂ ಸಮ್ಮೇಳನದಲ್ಲಿ ವಕ್ತಾರರಾಗಿ ಮಾತನಾಡಿದರು. ಹಿಂದೂ ಸಮಾಜ ಒಡೆಯಲು ದುಷ್ಟಶಕ್ತಿಗಳು ಪ್ರಯತ್ನಿಸುತ್ತಿವೆ. ಈ ಕಾರಣಕ್ಕೆ ಹಿಂದೂ ಸಮಾಜವು ಜಾತಿ ವ್ಯವಸ್ಥೆ ಮೀರಿ ಸಂಘಟನೆಗೊಳ್ಳಬೇಕಿದೆ. ಹಿಂದೂ ಸಮಾಜದಲ್ಲಿ ಹಲವು ಭಿನ್ನತೆಗಳಿದ್ದರೂ ನಾವೆಲ್ಲ ಒಂದೇ ತಾಯಿ ಮಕ್ಕಳು ಎಂಬುದು ಮರೆಯಬಾರದು. ಇಂದಿನ ಸಂಕ್ರಮಣ ಕಾಲದಲ್ಲಿ ಹಿಂದೂ ಸಮಾಜ ತನ್ನಲ್ಲಿನ ನ್ಯೂನ್ಯತೆಗಳನ್ನು ಹಾಗೂ ದೌರ್ಬಲ್ಯಗಳನ್ನು ತಿದ್ದುಕೊಂಡು, ಬಾಹ್ಯ ಮತ್ತು ಆಂತರಿಕ ಶಕ್ತಿಗಳು ಎದುರಿಸಲು ಒಗ್ಗೂಡುವುದು ತುರ್ತು ಅಗತ್ಯವಿದೆ ಎಂದರು.
ನಮ್ಮ ಪರಂಪರೆಯ ಜತೆ ಸಂಸ್ಕೃತಿ, ಧರ್ಮ ಉಳಿಸಲು ಜಾತಿಬೇಧ ಮರೆತು ಹಿಂದೂ ಸಮಾಜ ಸಂಘಟನೆಯ ಮೂಲಕವೇ ರಾಷ್ಟ್ರದ ಪ್ರಗತಿಗೂ ಕೈ ಜೋಡಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ದ್ವಾರಪುರ ಕ್ಷೇತ್ರದ ಪರಮಾತ್ಮ ಮಹಾರಾಜ ಮಾತನಾಡಿ, ಸಮಾಜದಲ್ಲಿ ಹಿಂದೂಗಳು ಕೇವಲ ಜಾಗೃತರಾದರೆ ಸಾಲದು, ಪರಿವರ್ತನೆ ಸಹ ಆಗಬೇಕಿದೆ. ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಒಳಗಾಗದಂತೆ ಎಚ್ಚರ ವಹಿಸಬೇಕು ಎಂದರು.
ಸಮಿತಿ ಅಧ್ಯಕ್ಷೆ ಡಾ. ಸೌಭಾಗ್ಯ ಕುಲಕರ್ಣಿ, ಉಪಾಧ್ಯಕ್ಷ ಗೋಪಾಲ ಲಮಾಣಿ ವೇದಿಕೆಯಲ್ಲಿದ್ದರು. ರವಿ ದೇಶಪಾಂಡೆ, ಲೋಕನಾಥ ಮಲ್ಲಿಗವಾಡ, ವಿನಾಯಕ ಜೋಶಿ, ಸುಮಂಗಲಾ ದಾಂಡೆವಾಲೆ, ರಾಜಶೇಖರ ಹಿರೇಗೌಡರ ಇತರರಿದ್ದರು.