iems job fair ಹುಬ್ಬಳ್ಳಿಯ ಐಇಎಂಎಸ್ ನಲ್ಲಿ ಭಾನುವಾರ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಆರ್ಎನ್ಎಸ್ ಮೋಟಾರ್ಸ್ನ ಸತೀಶ್, ಡಾ. ವೀರಣ್ಣ ಡಿ.ಕೆ., ಪ್ರೊ. ವಿ.ವಿ. ಹಿರೇಮಠ, ಪ್ರೊ. ಲಾಜರಸ್ ಚೆಲ್ಲಿ, ಪ್ರೊ. ವಿಶಾಲ್ ಪಾಟೀಲ ಇತರರು ಇದ್ದರು.
- ಐಇಎಂಎಸ್ನಲ್ಲಿ ಜಾಬ್ ಫೇರ್
- ಒಂದೇ ಸೂರಿನಡಿ ಅನೇಕ ಬಹುರಾಷ್ಟ್ರೀಯ ಕಂಪನಿ
ಹುಬ್ಬಳ್ಳಿ: iems job fair ಹೊಸ ಪದವೀಧರರಿಂದ ಉದ್ಯಮದ ನಿರೀಕ್ಷೆಗಳು ಬಹಳಷ್ಟು ಇರುತ್ತವೆ. ನಿರಂತರ ಕಲಿಕೆಯ ಉತ್ಸಾಹ, ತಂಡದಲ್ಲಿ ಕೆಲಸ ಮಾಡುವುದು, ಸಹಯೋಗ ಇತ್ಯಾದಿಗಳು ಉದ್ಯಮದ ನಿರೀಕ್ಷೆಗಳಾಗಿವೆ ಎಂದು ಆರ್ಎನ್ಎಸ್ ಮೋಟಾರ್ಸ್ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಹೇಳಿದರು.
ಇಲ್ಲಿಯ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜಮೆಂಟ್ ಸೈನ್ಸ್ (ಐಇಎಂಎಸ್) ಎಂಬಿಎ ಕಾಲೇಜು ಕ್ಯಾಂಪಸ್ನಲ್ಲಿ ಭಾನುವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಕೆಲಸಕ್ಕೆ ಸೇರಿದ ಆರಂಭಿಕರು ತಮಗೆ ಎದುರಾಗುವ ಸವಾಲುಗಳನ್ನು ಗೆಲ್ಲಲು ಶ್ರಮಿಸಬೇಕು. ದೀರ್ಘಾವಧಿಯ ಬದ್ಧತೆಯು ಖಂಡಿತವಾಗಿಯೂ ಅವರನ್ನು ವೃತ್ತಿ ಜೀವನದ ಅತ್ಯುನ್ನತ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಅಭಿಪ್ರಾಯ ಪಟ್ಟರು.
ಐಇಎಂಎಸ್ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಮಾತನಾಡಿ, ಸಂಸ್ಥೆಯ ಅಧ್ಯಕ್ಷ ಸಿಎ ಡಾ. ಎನ್.ಎ. ಚರಂತಿಮಠ ಅವರು ಯುವ ಜನರ ಸಲುವಾಗಿ ಒಂದೇ ಸೂರಿನಡಿ ಅನೇಕ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಿ ಉದ್ಯೋಗ ನೀಡುವ ಕೆಲಸ ಮಾಡಿದ್ದಾರೆ. ಈ ಮೇಳದಲ್ಲಿ 33 ಕಂಪನಿಗಳು ಭಾಗವಹಿಸಿ ಸುಮಾರು 300 ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸಿವೆ ಎಂದರು.