ಹುಬ್ಬಳ್ಳಿ ಐಬಿಎಂಆರ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ, ಆರ್ಥಿಕ ಅಭಿವೃದ್ಧಿ ಭಾರತ ಕಾರ್ಯಕ್ರಮವನ್ನು ಸಚಿವ ಸಂತೋಷ ಲಾಡ್ ಉದ್ಘಾಟಿಸಿದರು. ವಿನಯಚಂದ್ರ ಮಹೇಂದ್ರಕರ, ಸುಮಾ ಮಹೇಂದ್ರಕರ, ಡಾ. ಜೆ.ಎಸ್. ಭಟ್, ಈಗ್ನೇಶ ಸಕ್ರಿ, ಡಾ. ಎಚ್.ವಿ. ಬೆಳಗಲಿ, ಇತರರಿದ್ದರು.
ಹುಬ್ಬಳ್ಳಿ: ಆರ್ಥಿಕವಾಗಿ ಸದೃಢ ದೇಶ ನಿರ್ಮಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಂಡುವ ಹೋಗುವ ಗುರುತರ ಜವಾಬ್ದಾರಿ ದೇಶದ ಯುವ ಸಮೂಹದ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ವಿದ್ಯಾನಗರದ ಅಕ್ಷಯ ಕಾಲನಿಯಲ್ಲಿರುವ ಐಬಿಎಂಆರ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ, ಆರ್ಥಿಕ ಅಭಿವೃದ್ಧಿ ಭಾರತ ‘ಫಿನೋವೇಟ್ ಸಮಿತ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ವಾಟ್ಸ್‌ಆ್ಯಪ್, ಇನ್‌ಸ್ಟಾ ಗ್ರಾಂ ಮತ್ತಿತರ ಸಾಮಾಜಿಕ ಜಾಲತಾಣ ವೀಕ್ಷಣೆಯಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಅರ ಬದಲು ಅದೇ ಸಮಯವನ್ನು ತಮ್ಮ ಗುರಿ ಸಾಧನೆಗೆ ಬಳಸಿದರೆ ನಿಶ್ಚಿತವಾಗಿ ಯಶಸ್ಸು ಗಳಿಸಬಹುದು. ಸಿಗರೇಟ್, ಗಾಂಜಾ, ಮತ್ತಿತರ ದುಶ್ಚಟಗಳ ದಾಸರಾಗದೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಜೀವನದಲ್ಲಿ ಯಾರು ಪ್ರತಿನಿತ್ಯ ತಪ್ಪದೇ ಶಿಸ್ತನ್ನು ಪಾಲಿಸುತ್ತಾರೋ ಅವರೇ ಸಾಧಕರಾಗುತ್ತಾರೆ. ಯುವಕರು ಸಮಯಪ್ರಜ್ಞೆ ಮತ್ತು ಶಿಸ್ತನ್ನು ಪಾಲಿಸಿ ಅಭ್ಯಾಸ ಮಾಡಬೇಕು. ಸರ್ಕಾರ ಕೂಡ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಅದೇ ರೀತಿ ಮುಂಬರುವ ಫೆಬ್ರವರಿಯಲ್ಲಿ ಐಬಿಎಂಆರ್ ಸಂಸ್ಥೆ ಆಯೋಜಿಸುವ ಫಿನ್‌ಟೆಕ್ ಸ್ಟಾರ್ಟ್‌ಅಪ್ ಆ್ಯಂಡ್ ಪಿಚ್ಚಿಂಗ್ ಸ್ಪರ್ಧೆಗೆ ಲಾಡ್ ಫೌಂಡೇಷನ್‌ನಿಂದ ಅಗತ್ಯ ಸಹಾಯ- ಸಹಕಾರ ನೀಡುವುದಾಗಿ ಘೋಷಿಸಿದರು.
ಸೂರತ್ ಐಐಟಿ ಮಾಜಿ ನಿರ್ದೇಶಕ ಡಾ. ಜೆ.ಎಸ್. ಭಟ್ ಮಾತನಾಡಿ, ಇಂದಿನ ಯುವ ಸಮೂಹ ಆಧುನಿಕ ತಂತ್ರಜ್ಞಾನವನ್ನು ತಮ್ಮ ಶೈಕ್ಷಣಿಕ ಜ್ಞಾನ ವೃದ್ಧಿಗೆ ಮತ್ತು ಗುರಿ ಸಾಧನೆಗೆ ಬಳಸಿಕೊಳ್ಳಬೇಕು. ಈ ಮೂಲಕ ಉತ್ಕೃಷ್ಟ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದನ್ನು ಇಲ್ಲಿನ ಹಲವಾರು ವಿದ್ಯಾರ್ಥಿಗಳು ಸಾಧಿಸಿ ತೋರಿಸಿದ್ದಾರೆ ಎಂದರು.
ಐಬಿಎಂಆರ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ, ಸುಮಾ ಮಹೇಂದ್ರಕರ, ಈಗ್ನೇಶ ಸಕ್ರಿ, ಡಾ. ಅರುಣ ಶೆಟ್ಟಿ, ಎಸ್.ಡಿ. ಪಾಟೀಲ, ಸಂಜನಾ ಮಹೇಂದ್ರಕರ, ಪ್ರೊ. ರೇಖಾ ಮಹೇಂದ್ರಕರ, ಡಾ. ಸರಿತಕುಮಾರ, ಕಾನೂನು ವಿವಿ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಮಲ್ಲನಗೌಡ ಪಾಟೀಲ, ಎಲ್ಲ ವಿಭಾಗದ ಮುಖ್ಯಸ್ಥರು, ಪ್ರಾಚಾರ್ಯರು, ವಿದ್ಯಾರ್ಥಿಗಳಿ ಇದ್ದರು.