IAS ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ.
- ಎಂಡಿ ರಾಠೋಡ ಬದಲಾವಣೆಗೆ ರೈತ ಸೇನಾ ಕರ್ನಾಟಕ ಒತ್ತಾಯ.
- ಇಂತಹ ಅಧಿಕಾರಿಗಳಿಂದ ರೈತರಿಗೆ ಹಾಗೂ ಸರ್ಕಾರಕ್ಕೆ ಬಹಳಷ್ಟು ನಷ್ಟ ಆಗುತ್ತದೆ.
- ಮಹದಾಯಿ ನದಿ ನೀರು ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಹುಬ್ಬಳ್ಳಿ :
ಎಂಡಿ ಬಿ.ಆರ್. ರಾಠೋಡ ಅವರು ಈ ಮೊದಲು ರಾಮನಗರದಲ್ಲಿ ಮುಖ್ಯ ಇಂಜಿನಿಯರ್ ಆಗಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರದಲ್ಲಿ ಅವರ ಹೆಸರು ಕೇಳಿಬಂದಿದೆ. ರಾಠೋಡ ಅವರ ಈ ಹಿಂದಿನ ಕೆಲಸದಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದರು.
ರಾಠೋಡ ಅವರು ನೀರಾವರಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಹುದ್ದೆ ನಿರ್ವಹಿಸುವುದು ಸರಿಯಲ್ಲ. ಇಂತಹ ಅಧಿಕಾರಿಗಳಿಂದ ರೈತರಿಗೆ ಹಾಗೂ ಸರ್ಕಾರಕ್ಕೆ ಬಹಳಷ್ಟು ನಷ್ಟ ಆಗುತ್ತದೆ.
ಮುಖ್ಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ ಅಧಿಕಾರಿಯನ್ನು ಮುಂಬಡ್ತಿ ಆಧಾರದ ಮೇಲೆ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಕಗೊಳಿಸಿರುವುದು ಸರಿಯಲ್ಲ ಎಂದು ತಿಳಿಸಿದರು.
ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೂ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಐಎಎಸ್ ಅಧಿಕಾರಿ ನೇಮಿಸುವಂತೆ ಮನವಿ ನೀಡಲಾಗಿತ್ತು. ಈಗಿನ ಸರ್ಕಾರಕ್ಕೂ ಈ ಕುರಿತು ಮನವಿ ನೀಡಲಾಗಿದೆ ಎಂದು ಹೇಳಿದರು.
ಸರ್ಕಾರ ನಮ್ಮ ಮನವಿ ತಿರಸ್ಕರಿಸಿದಲ್ಲಿ ಬೆಂಗಳೂರಿಗೆ ತೆರಳಿ, ಸಂಬಂಧಿಸಿದ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದು. ರಾಜಭವನಕ್ಕೂ ತೆರಳಿ, ಅಹವಾಲು ಸಲ್ಲಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ತನ್ನ ಪಾಲಿನ ಮಹದಾಯಿ ನದಿ ನೀರು ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ನಲ್ಲಿ ಮಹದಾಯಿ ನೀರಿಗಾಗಿ ಕರ್ನಾಟಕದ ಪರವಾಗಿ ವಾದ ನಡೆಸುತ್ತಿರುವ ವಕೀಲರಿಗೆ ರಾಜ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಅವರು ತಮ್ಮ ವಕೀಲಿಕಿ ಶುಲ್ಕಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮಲ್ಲಣ್ಣ ಆಲೇಕರ, ನಾಗರಾಜ ಬಿಕ್ಕಣ್ಣವರ, ಗುರುಶಾಂತ ಕಾರಿ ಸುದ್ದಿಗೋಷ್ಠಿಯಲ್ಲಿ ಇದ್ದರು.