ಶಿವಾನಂದ ಬಳ್ಳೂರ 
ಧಾರವಾಡ

ಪತ್ನಿಯನ್ನು ಕೊಂದಿದ್ದ ಪತಿಗೆ ಜೀವಾವಧಿ ಶಿಕ್ಷೆ

ಧಾರವಾಡ: ಪತ್ನಿಯನ್ನು ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಪತಿಗೆ 4ನೇ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಿ ಗುರುವಾರ ಆದೇಶಿಸಿದೆ. ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದ ಶಿವಾನಂದ ಬಳ್ಳೂರ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ತನ್ನ ಪತ್ನಿ ಮಲ್ಲವ್ವ ಪದೇಪದೇ ತವರು ಮನೆಗೆ ಹೋಗುತ್ತಾಳೆ ಎಂದು ಶಿವಾನಂದ ಸಂಶಯ ಪಟ್ಟು ಜಗಳವಾಡುತ್ತಿದ್ದ. ಆಕೆಯ ನಡವಳಿಕೆಯ ಬಗ್ಗೆ ಸಂಶಯಗೊಂಡು 2024ರ ಏ. 27ರಂದು ಬೆಳಗಿನ ಜಾವ 4.-30ರ ಸುಮಾರಿಗೆ ಮಲ್ಲವ್ವಳ ತಲೆಗೆ ಕೊಡಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ತಾಯಿಯ ಪಕ್ಕದಲ್ಲೇ ಮಲಗಿದ್ದ ಅಪ್ರಾಪ್ತ ಇಬ್ಬರು ಮಕ್ಕಳು ಟನೆಯ ಪ್ರತ್ಯಕ್ಷದಶಿರ್ಯಾಗಿದ್ದರು. ಈ ಕುರಿತು ಮೃತಳ ತಂದೆ ಗದಿಗೆಪ್ಪ ತಳವಾರ ಹಾಗೂ ಮೃತಳ ಅಪ್ರಾಪ್ತ ಮಕ್ಕಳು ನವಲಗುಂದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನವಲಗುಂದ ವೃತ್ತದ ಸರ್ಕಲ್​ ಪೊಲೀಸ್​ ಇನ್​ಸ್ಪೆಪೆಕ್ಟರ್​ ಆರ್​.ಎಸ್​. ಕಪ್ಪತ್ತನವರ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
4ನೇ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯ ನ್ಯಾಯಾಧೀಶರಾದ ರ್ಪೂಣಿಮಾ ಎನ್​. ಪೈ ಅವರು ಪ್ರಕರಣದ ಕೂಲಂಕುಷ ವಿಚಾರಣೆ ನಡೆಸಿದ್ದರು. ಘಟನೆಯ ಕುರಿತು ಮೃತಳ ಅಪ್ರಾಪ್ತ ಮಗಳಾದ ಸೌಭಾಗ್ಯಾ ಬಳ್ಳೂರ ನ್ಯಾಯಾಲಯದಲ್ಲಿ ವಿವರ ಸಾಕ್ಷ$್ಯ ನುಡಿದಿದ್ದಳು. ತನಿಖಾಧಿಕಾರಿ ಪೂರಕ ಸಾಾಧಾರಗಳನ್ನು ಸಲ್ಲಿಸಿದ್ದರಿಂದ ಶಿವಾನಂದ ತಪ್ಪಿತಸ್ಥ ಎಂದು ಸಾಬೀತಾಗಿದೆ. ಆತನಿಗೆ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತವನ್ನು ಮೃತಳ ಅಪ್ರಾಪ್ತ ಪುತ್ರ, ಪುತ್ರಿಗೆ ತಲಾ 1 ಲಕ್ಷ ರೂ. ನೀಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಪ್ರಾಸಿಕ್ಯೂಶನ್​ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಪಿ.ಎಸ್​. ತೊರಗಲ್​ ವಾದ ಮಂಡಿಸಿದ್ದರು.