ಧಾರವಾಡ: ಧಾರವಾಡ- ಸವದತ್ತಿ ರಸ್ತೆಯ ಶ್ರೀ ದುರ್ಗಾದೇವಿ ದೇವಸ್ಥಾನದ ಹತ್ತಿರ ಫೆ. 26ರಂದು ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿದ್ದ ಪ್ರಕರಣ ಹೊಸ ತಿರುವು ಪಡೆದಿದೆ. ಗಂಡನೇ ಪತ್ನಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿರುವ ಸಂಗತಿಯನ್ನು ಪೊಲೀಸರು ಭೇದಿಸಿದ್ದಾರೆ.
ಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಫೆ. 26ರಂದು ಬೆಳಗ್ಗೆ 11.50ರ ಸುಮಾರಿಗೆ ಸವದತ್ತಿ ಮುಖ್ಯ ರಸ್ತೆಪಕ್ಕ ಲಲಿತಾ ಹಾತರಕಿ ಎಂಬುವರ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆ ಸಾವು ಎನ್ನಲಾಗಿತ್ತು. ಈ ಸಂಬಂಧ ಮೃತಳ ತಂದೆ ನಿಂಗಪ್ಪ ನೀಲಣ್ಣವರ ದೂರು ನೀಡಿ ತನಿಖೆ ನಡಸುವಂತೆ ಆಗ್ರಹಿಸಿದ್ದರು. ಪ್ರಕರಣದ ತನಿಖೆಗೆ 5 ತಂಡಗಳನ್ನು ರಚಿಸಲಾಗಿತ್ತು. ವೈಜ್ಞಾನಿಕ ಸಾಾಧಾರ, ತಾಂತ್ರಿಕ ಸುಳಿವಿನ ಆಧಾರದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
* ಸಿನಿಮಾ ಶೈಲಿ ಸುಪಾರಿ ಕೊಲೆ: ಮೃತ ಲಲಿತಾಳ ವಿವಾಹ ತಾಲೂಕಿನ ನರೇಂದ್ರ ಗ್ರಾಮದ ಉದಯಕುಮಾರ ಹಾತರಕಿ ಎಂಬುವರೊಂದಿಗೆ ಆಗಿತ್ತು. ಕೆಲ ವರ್ಷಗಳಿಂದ ಬೇರ್ಪಟ್ಟು ಲಲಿತಾ ಸೋಮಾಪುರದ ತವರುಮನೆಯಲ್ಲಿದ್ದರು. ಈ ಮಧ್ಯೆ ಆರೋಪಿ ಉದಯಕುಮಾರ ಮತ್ತೊಂದು ಮದುವೆಯಾಗಿದ್ದ. ಜಮೀನಿನ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಲೋಕ ಅದಾಲತ್ನಲ್ಲಿ ಲಲಿತಾಗೆ ಜೀವನಾಂಶವಾಗಿ 1.5 ಎಕರೆ ಜಮೀನು ನೀಡಬೇಕು ಎಂದು ಆದೇಶವಾಗಿತ್ತು. ಆದರೆ, ಇದಕ್ಕೆ ಒಪ್ಪದ ಉದಯಕುಮಾರ, ಫೆ. 25ರಂದು ಪತ್ನಿಗೆ ಕರೆ ಮಾಡಿ ಮಾತನಾಡಲು ಕರೆದಿದ್ದ. ಅದರಂತೆ ದುರ್ಗಾದೇವಿ ಗುಡಿಯ ಹತ್ತಿರ ಬಂದಿದ್ದ ಲಲಿತಾಳಗೆ ಗೆಳೆಯರ ಥಾರ್ನಿಂದ ಡಿಕ್ಕಿಪಡಿಸಿ ಕೊಲೆ ಮಾಡಿಸಿದ್ದ ಎಂದು ಎಸ್ಪಿ ಗುಂಜನ್ ತಿಳಿಸಿದರು.
* ಅಪಘಾತಕ್ಕೆ ಥಾರ್ ಬಳಸಿದ್ದ ಆರೋಪಿಗಳು:
ತಾಲೂಕಿನ ಕರಡಿಗುಡ್ಡ ಕಡೆಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಸಾರಿಗೆ ಬಸ್ನ ಡ್ಯಾಶ್ ಕ್ಯಾಮ್ನಲ್ಲಿ ಅಪಘಾತದ ದೃಶ್ಯ ಸೆರೆಯಾಗಿತ್ತು. ಎದುರಿಗೆ ವಾಹನಗಳು ಇಲ್ಲದಿದ್ದರೂ ಥಾರ್ ರಸ್ತೆಬದಿ ನಡೆದು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿರುವುದು ಶಂಕಾಸ್ಪದವಾಗಿತ್ತು. ನಂಬರ್ಪ್ಲೇಟ್ ಇಲ್ಲದ ಥಾರ್ ಜೀಪನ್ನು ತಾಂತ್ರಿಕ ಸಾಾಧಾರಗಳ ಮೂಲಕ ಪತ್ತೆ ಮಾಡಲಾಗಿದೆ. ಈ ಸಂಬಂದ ಮೃತಳ ಪತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪತ್ನಿಯ ಕೊಲೆಗೆ 40 ಲಕ್ಷ ರೂಪಾಯಿ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಈ ಸಂಬಂಧ ಮೃತಳ ಪತಿ, ನರೇಂದ್ರ ಗ್ರಾಮದ ಉದಯಕುಮಾರ ಹಾತರಕಿ, ಗರಗ ಗ್ರಾಮದ ನಾಗಪ್ಪ ಪಡೇಕರ, ಕಿತ್ತೂರ ತಾಲೂಕಿನ ನಿಚ್ಚಣಕಿಯ ಅಭಿಷೇಕ ವರಗನ್ನವರ ಹಾಗೂ ಸವದತ್ತಿ ತಾಲೂಕು ದೊಡವಾಡದ ನಾಗರಾಜ ಉಪ್ಪಿನ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಥಾರ್ ಜೀಪ್, 4 ಮೊಬೈಲ್, 20 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.