holy festivel: ಅಣ್ಣಿಗೇರಿ ಪಟ್ಟಣದಲಿ ಹೊಸಪೇಟೆ ಓಣಿಯಲ್ಲಿ ಹೋಳಿ ( holy festivel) ಹುಣ್ಣಿಮೆಗೆ ಕಾಮಣ್ಣನ ಬಂಡಿ ತಯಾರಿಸುತ್ತಿರುವುದು. 
ಧಾರವಾಡ

holy festivel: ರಂಗಿನೋಕುಳಿಗೆ ಹುಲುಗಾಮನ ಮೆರುಗು

ಅಣ್ಣಿಗೇರಿ: ಹೋಳಿ ಹುಣ್ಣಿಮೆ (in holy festivel) ಎಂದಾಕ್ಷಣ ನೆನಪಿಗೆ ಬರುವುದು ರತಿ-ಮನ್ಮಥರು. ಮತ್ತೊಂದೆಡೆ ಪರಸ್ಪರ ಬಣ್ಣ ಹಚ್ಚಿ ಬಾಯಿ ಬಾಯಿ ಬಡಿದುಕೊಳ್ಳುವುದು, ಹಲಗಿ ಹೊಡೆಯುವುದು. ಆದರೆ, ಅಣ್ಣಿಗೇರಿಯಲ್ಲಿ ವಿಶಿಷ್ಟವಾಗಿ ಹುಲುಗಾಮನ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.
ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಹಬ್ಬಕ್ಕೆ ಪೂರಕವಾದ ಸಿದ್ಧತೆಗಳನ್ನು ಹಿರಿಯರು ಮಾಡುತ್ತಾರೆ. ಯುವಕರು ಕಾಮ ದಹನಕ್ಕೆ ಅಗತ್ಯವಿರುವ ಕಟ್ಟಿಗೆ, ಕುಳ್ಳುಗಳನ್ನು ಕದ್ದು ತಂದು ಹಾಕುತ್ತಾರೆ. ಜಾತಿ- ಧರ್ಮ, ಹಿರಿಯರು-ಕಿರಿಯರು ಎನ್ನುವ ಭೇದವಿಲ್ಲದೆ ಸಾಮರಸ್ಯದಿಂದ ಹಬ್ಬ ಆಚರಿಸಲಾಗುತ್ತದೆ.
ರತಿ-ಮನ್ಮಥರನ್ನು ಪ್ರತಿಷ್ಠಾಪಿಸಿದ ಬಳಿಕ ಭಕ್ತರು ಪೂಜೆ ಸಲ್ಲಿಸಿ, ವಿವಿಧ ಭೋಜನ ತಯಾರಿಸಿ ನೈವೇದ್ಯ ಅರ್ಪಿಸುತ್ತಾರೆ. ಇಷ್ಟಾರ್ಥ ಪೂರೈಸುವಂತೆ ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಪಟ್ಟಣದ ವಿವಿಧೆಡೆ ಒಂದರ ನಂತರ ಒಂದೊಂದಾಗಿ ಮೂರ್ತಿಗಳನ್ನು ದಹನ ಮಾಡಲಾಗುತ್ತದೆ. ಕಾಮದಹನ ವೇಳೆ ಯುವಕರು ಬಾಯಿ ಬಡಿದುಕೊಳ್ಳುತ್ತಾರೆ. ನಂತರ ಕಾಮನ ಕಿಚ್ಚನ್ನು ಮನೆಗೆ ತೆಗೆದುಕೊಂಡು ಹೋಗಿ ರೈತರು ವರ್ಷದಲ್ಲಿ ಬೆಳೆದ ಕುಸುಬಿ, ಕಡಲೆಗಳನ್ನು ಸುಟ್ಟು ತಿನ್ನುತ್ತಾರೆ. ವಿಶೇಷವಾಗಿ ಹುಲ್ಲಿನಿಂದ ಬೃಹತ್ ಮೂರ್ತಿ ತಯಾರಿಸಿ ವಿಶಿಷ್ಟವಾಗಿ ಅಲಂಕಾರ ಮಾಡಿ ತಯಾರಿಸಲಾದ ಹುಲುಗಾಮನ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಹಳ್ಳಿಗಳಿಂದ ಮತ್ತು ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಯಿಂದಲೂ ಜನರು ಆಗಮಿಸುತ್ತಾರೆ.

ಕಲ್ಪಿತ ಶವಯಾತ್ರೆ

ಕಾಮದಹನದ ನಂತರ ಯುವಕರು ಕಲ್ಪಿತ ಶವಯಾತ್ರೆ ಮಾಡುತ್ತಾರೆ. ಶವವನ್ನು ಮನೆ-ಮನೆಗೆ ತೆಗೆದುಕೊಂಡು ಹೋಗಿ ಬಾಯಿ ಬಾಯಿ ಬಡಿದುಕೊಳ್ಳುತಾ ನಮ್ಮ ಶವಕ್ಕೆ ಹೋಳಿ ಹಬ್ಬದ ವಿಶೇಷ ಹೋಳಿಗೆ ತುಪ್ಪ ಕೊಡಿ ಎಂದು ಕೇಳುತ್ತಾರೆ.

ಪಟ್ಟಣದಲ್ಲಿ ರಂಗಿನೋಕುಳಿ

ಪಟ್ಟಣದ ಹೊರಕೇರಿ ಓಣಿ ಮತ್ತು ಹೊಸಪೇಟೆ ಓಣಿ ಗಳಲ್ಲಿ ವಿಶಿಷ್ಟವಾಗಿ ಚಕ್ಕಡಿ ಬಂಡಿ ತಯಾರಿಸಿ ಹುಲುಗಾಮನನ್ನು ನಿರ್ಮಿಸಲಾಗುತ್ತದೆ. ಹುಲುಗಾಮನಿಗೆ ವಿವಿಧ ವಸ್ತುಗಳಿಂದ ಸಿಂಗರಿಸಿ 40ಕ್ಕೂ ಹೆಚ್ಚು ಸಿಂಗಾರಗೊಂಡ ಜೋಡೆತ್ತುಗಳ ಮಧ್ಯೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಹುಲುಗಾಮನನ್ನು ಜೋಳದ ದಂಟು, ತೊಗರಿ ಕಟ್ಟಿಗೆ, ಭತ್ತದ ಹುಲ್ಲನ್ನು ಬಳಸಿಕೊಂಡು ಎದೆ, ಹೊಟ್ಟೆ, ಕೈ, ಕಾಲು ನಿರ್ಮಿಸಲಾಗುತ್ತದೆ, ನಂತರ ಕಾಮಣ್ಣ ( ಮನ್ಮಥನ) ಮುಖವಾಡ ಹಾಕಲಾಗುತ್ತದೆ. ನಂತರ ಕಾಮಣ್ಣನನ್ನು ಪೂಜಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮರಳಿ ಪ್ರತಿಷ್ಠಾಪಿಸಿದ ಸ್ಥಳಕ್ಕೆ ಕಾಮಣ್ಣನ ಬಂಡಿ ಬಂದ ನಂತರ ಪಟ್ಟಣದಲ್ಲಿ ಬಣ್ಣವಾಡಲು ಪ್ರಾರಂಭಿಸುತ್ತಾರೆ. ಕೊನೆಗೆ ಯುವಕರು ಕದ್ದು ತಂದ ಕುಳ್ಳು, ಕಟ್ಟಿಗೆಗೆಳನ್ನು ರಾಶಿ ಹಾಕಿ ಮನ್ಮಥರ ಭಾವಚಿತ್ರವಿಟ್ಟು ಅಗ್ನಿ ಸ್ಪರ್ಷ ಮಾಡಲಾಗುತ್ತದೆ.