huda protest ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ವಸತಿ ರಹಿತರು.
- ದಶಕಗಳಿಂದ ಸೂರಿಲ್ಲದೇ ಸಾವಿರಾರು ಜನರ ಪರದಾಟ
- ನಿವೇಶನ ರಹಿತರ ಆಂದೋಲನ ಸಂಘಟನೆ ವತಿಯಿಂದ ಹೋರಾಟ
ಹುಬ್ಬಳ್ಳಿ: huda protest ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು (ಹುಡಾ) ಹಿಂದುಳಿದವರಿಗೆ ಸೂರು ಕಲ್ಪಿಸುವ ತನ್ನ ಮೂಲ ಉದ್ದೇಶ ಬಿಟ್ಟು ಬೇರೆಲ್ಲ ಕೆಲಸಗಳನ್ನು ಮಾಡುತ್ತಿದೆ ಎಂದು ಆರೋಪಿಸಿ ನಿವೇಶನ ರಹಿತರ ಆಂದೋಲನ ಸಂಘಟನೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿಯ ನವನಗರದ ಹುಡಾ ಕಚೇರಿ ಎದುರು ಸಂಘಟನೆಯ ನೂರಾರು ಸದಸ್ಯರು ಧರಣಿ ನಡೆಸಿ ಆಡಳಿತ ವ್ಯವಸ್ಥೆ ವಿರುದ್ಧ ಘೋಷಣೆ ಕೂಗಿದರು. ನಿವೇಶನ ರಹಿತ ಅನೇಕ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಬಡವರು, ಆರ್ಥಿಕ ಹಿಂದುಳಿದವರಿಗೆ ಮನೆ, ನಿವೇಶನ ಕೊಡಲು ಆಗದಿದ್ದರೆ ಪ್ರಾಧಿಕಾರ ಯಾತಕ್ಕಾಗಿ ಇದೆ? ಸರ್ಕಾರಿ ಕಚೇರಿಯ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದರು.
ಪ್ರಾಧಿಕಾರವು ಇತ್ತೀಚೆಗೆ ಅವಳಿನಗರ ಸುತ್ತಲಿನ 46 ಹಳ್ಳಿಗಳನ್ನು ಹುಡಾ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಈ ಹಳ್ಳಿಗಳಲ್ಲಿ ಸರ್ಕಾರಿ ಭೂಮಿ, ಪಡ ಜಾಗ ಇವೆ. ಅವುಗಳನ್ನು ಗುರುತಿಸಿ, ಆರ್ಥಿಕ ಹಿಂದುಳಿದವರಿಗಾಗಿ ಜಾಗ ಮೀಸಲಿಡಬೇಕು. ಅದರಲ್ಲಿ ಲೇಔಟ್ ನಿರ್ಮಿಸಿ ಹಂಚಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹುಡಾ ಅಧ್ಯಕ್ಷ ಶಾಕೀರ್ ಸನದಿ ಅವರು ಬಡವರ ಬಗ್ಗೆ ಕಾಳಜಿ ಉಳ್ಳವರು. ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಹಿಂದುಳಿದವರಿಗಾಗಿ ವಸತಿ ಯೋಜನೆ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ವಸತಿ ರಹಿತರು ಕೇಳುತ್ತಿದ್ದೇವೆ. ಕೂಡಲೇ ಯೋಜನೆ ಜಾರಿ ಮಾಡಬೇಕು ಎಂದರು.
ಈ ಕುರಿತು ಮನವಿಯನ್ನು ಹುಡಾ ಅಧ್ಯಕ್ಷ ಶಾಕೀರ್ ಸನದಿ ಅವರಿಗೆ ಸಲ್ಲಿಸಲಾಯಿತು. ಬಸವರಾಜ ಕಿತ್ತೂರ, ಇತರರು ಉಪಸ್ಥಿತರಿದ್ದರು.
ರಾಜು ಹಿರೇವಡಿಯರ, ನಾಗರಾಜ ನಾಡಕರ್ಣಿ, ಕಿರಣಸಿಂಗ್ ರಜಪೂತ, ಮಹಾದೇವಿ ಉಮಚಗಿ, ಬಿಬಿಜಾನ್ ಮುಲ್ಲಾ ಇತರರು ಇದ್ದರು.