train ರೈಲು ಸಂಚಾರ ವಿಸ್ತರಣೆ ಹಾಗೂ ರೈಲ್ವೆ ನಿಲ್ದಾಣ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರೊಂದಿಗೆ ಮಾತುಕತೆ ನಡೆಸಿದರು.
- ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ಉನ್ನತೀಕರಣ ಭರವಸೆ
- ಸಚಿವ ಪ್ರಲ್ಹಾದ ಜೋಶಿ ಮನವಿಗೆ ಸ್ಪಂದಿಸಿದ ಅಶ್ವಿನಿ ವೈಷ್ಣವ
- ಹೆಚ್ಚಿನ ರೈಲು ಸೇವೆಗಾಗಿ ಮನವಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬುಧವಾರ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿಯಾಗಿ, ಹೆಚ್ಚಿನ ರೈಲು ಸೇವೆಗಾಗಿ ಮನವಿ ಮಾಡಿದರು.
ಸದ್ಯ ಹುಬ್ಬಳ್ಳಿ - ವಾರಾಣಸಿ ರೈಲು ವಾರದಲ್ಲಿ ಒಂದು ದಿನ ಸಂಚರಿಸುತ್ತಿದ್ದು, ಇದನ್ನು ಮೂರು ದಿನ ವಿಸ್ತರಿಸಿದರೆ ಕಾಶಿ, ವಾರಾಣಸಿಗೆ ಧಾರ್ವಿುಕ ಯಾತ್ರೆ ಕೈಗೊಳ್ಳುವ ಉತ್ತರ ಕರ್ನಾಟಕ ಭಾಗದ ಭಕ್ತರಿಗೆ, ಪ್ರವಾಸಿಗರಿಗೆ, ವ್ಯಾಪಾರ ನಿಮಿತ್ತ ಪ್ರಯಾಣಿಸುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವ ಜೋಶಿ ಗಮನ ಸೆಳೆದರು.
ರೈಲು ನಿಲ್ದಾಣ ಹೈಟೆಕ್: ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣವನ್ನು ಆಧುನಿಕ ಹಾಗೂ ಹೈಟೆಕ್ ಸೌಲಭ್ಯಗಳೊಂದಿಗೆ ಮತ್ತಷ್ಟು ಉತ್ತಮ ಪಡಿಸುವಂತೆಯೂ ಸಚಿವ ಜೋಶಿ ವಿನಂತಿಸಿದರು.
ರೈಲು ನಿಲ್ದಾಣದಲ್ಲಿ ರ್ಪಾಂಗ್ ವ್ಯವಸ್ಥೆ, ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್, ರೆಸ್ಟೋರೆಂಟ್ಗಳು, ವಾಣಿಜ್ಯ ಮಳಿಗೆಗಳು ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ಹಲವು ಸೌಲಭ್ಯಗಳನ್ನು ಕಲ್ಪಿಸುವಂತೆ ಕೋರಿದರು.
ಪ್ರಲ್ಹಾದ ಜೋಶಿ ಅವರ ಕೋರಿಕೆಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರ ಹುಬ್ಬಳ್ಳಿ-ವಾರಾಣಸಿ ರೈಲು ಸಂಚಾರವನ್ನು ಇನ್ನು ಮುಂದೆ ವಾರಕ್ಕೆ ಮೂರು ದಿನಗಳಿಗೆ ವಿಸ್ತರಿಸುವುದಾಗಿ ಭರವಸೆ ನೀಡಿದರು.
ಮುಂಬರುವ ದಿನಗಳಲ್ಲಿ ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣದ ಉನ್ನತೀಕರಣಕ್ಕೂ ಅಶ್ವಿನಿ ವೈಷ್ಣವ ಸಮ್ಮತಿಸಿದ್ದಾರೆ.