ನವಲಗುಂದ ಹಳೆಯ ತಹಸೀಲ್ದಾರ್ ಕಚೇರಿಯಲ್ಲಿ ಪೊಲೀಸ್ ಇಲಾಖೆ ವಶಪಡಿಸಿಕೊಂಡಿರುವ ವಾಹನಗಳು. 
ಧಾರವಾಡ

ನವಲಗುಂದದಲ್ಲಿ ಗುಜರಿ ವಾಹನಗಳದ್ದೇ ಕಾರುಬಾರು seized vehicle

ಪ್ರಮುಖ ಮುಖ್ಯಾಂಶಗಳು

  • ನವಲಗುಂದ ಹಳೆಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬೋಟ್, ಟ್ರಾೃಕ್ಟರ್
ನವಲಗುಂದ: ಪಟ್ಟಣದ ಹಳೆಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕಳೆದ ಒಂದೂವರೇ ದಶಕದಿಂದ ಗುಜರಿ ವಾಹನಗಳದ್ದೇ ಕಾರುಬಾರು ಎನ್ನುವಂತಾಗಿದೆ. ತಾಲೂಕಿನಲ್ಲಿ ಅಪಘಾತಕ್ಕೆ ಒಳಗಾದ, ಅಕ್ರಮವಾಗಿ ಕಾಳು, ಮರಳು ಸಾಗಿಸುತ್ತಿದ್ದ ವಾಹನಗಳು, ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಬೋಟ್ ಸೇರಿದಂತೆ ಗುಜರಿಯಾಗಿರುವ ಎಲ್ಲ ಸಾಮಗ್ರಿಗಳನ್ನು ಪೊಲೀಸ್ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿ ಆ ವಾಹನಗಳನ್ನು ಹಳೆಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಂದು ನಿಲ್ಲಿಸುತ್ತಾರೆ. 
ಇದರಿಂದ ಇಲ್ಲಿಗೆ ಬರುವ ಸಾರ್ವಜನಿಕರು, ಸಿಬ್ಬಂದಿಗೆ ತುಂಬಾ ಸಮಸ್ಯೆಯಾಗಿದೆ. ಪೊಲೀಸ್ ಇಲಾಖೆ ಸೀಜ್ ಮಾಡಿದ ವಾಹನಗಳನ್ನು ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಿಲ್ಲಿಸಲು ಪೊಲೀಸ್ ಇಲಾಖೆಯಿಂದ ಈವರೆಗೂ ಯಾವುದೇ ಪರವಾನಗಿ ಪಡೆದಿಲ್ಲ ಎಂದು ತಿಳಿದು ಬಂದಿದೆ. 
ಈ ಆವರಣದಲ್ಲಿ ಕಂದಾಯ ಇಲಾಖೆ, ಭೂಮಾಪನ ಹಾಗೂ ಗ್ರಾಮಲೆಕ್ಕಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಿದ್ದು, ಅಲ್ಲಿಗೆ ತೆರುಳುವ ಸಿಬ್ಬಂದಿ, ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಹಾಗೂ ತೆರಳಲು ಜಾಗ ಇಲ್ಲದಂತಾಗಿದೆ. ಅಲ್ಲದೆ, ರಜೆ ದಿನಗಳಲ್ಲಿ ಇಲ್ಲಿನ ಸರ್ಕಾರಿ ಕಚೇರಿ ಬಾಗಿಲ ಮುಂದೆಯೇ ಕೆಲವರು ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂದು ಸಿಬ್ಬಂದಿ ಬೇಸರದಿಂದ ಹೇಳಿದರು. 
ಲಾರಿಯಲ್ಲಿದ್ದ ಅಕ್ಕಿ ವಾಸನೆ: ಕಳೆದ ಎರಡ್ಮೂರು ತಿಂಗಳ ಹಿಂದೆ ಅಕ್ರಮವಾಗಿ ಸಾಗಿಸುತ್ತಿದ ಅಕ್ಕಿ ಲಾರಿಯನ್ನು ಹಿಡಿದ ಪೊಲೀಸರು ಅದರಲ್ಲಿದ್ದ ಅಕ್ಕಿ ಚೀಲಗಳನ್ನು ಖಾಲಿ ಮಾಡಿ, ಉಳಿದ ಅಕ್ಕಿಯನ್ನು ಸ್ವಚ್ಛಗೊಳಿಸದೇ ವಾಹನವನ್ನು ಹಾಗೇ ನಿಲ್ಲಿಸಿದ್ದರು. ಇತ್ತೀಚೆಗೆ ಸುರಿದ ಮಳೆಯಿಂದ ಅಕ್ಕಿ ನೆನೆದು ದುರ್ವಾಸನೆ ಬರುತ್ತಿದೆ. ಇದರಿಂದಾಗಿ ಇಲ್ಲಿಗೆ ಬರುವ ಸಾರ್ವಜನಿಕರು ಹಾಗೂ ಸಿಬ್ಬಂದಿ ಮೂಗು ಮುಚ್ಚಿಕೊಂಡು ಬರುವಂತಾಗಿದೆ ಎಂದು ನಾಗರಿಕರೊಬ್ಬರು ದೂರಿದರು.
"

ಪೊಲೀಸ್ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ ವಾಹನಗಳನ್ನು ತಹಸೀಲ್ದಾರ್ ಇಲಾಖೆ ಆವರಣದಲ್ಲಿ ನಿಲ್ಲಿಸಲು ಯಾವುದೇ ರೀತಿಯ ಪರವಾನಗಿ ಪಡೆದಿಲ್ಲ. ಕೆಲ ಗುಜರಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವಂತೆ ಪೊಲೀಸ್ ಅಧಿಕಾರಿಗಳುಗೆ ಮೌಖಿಕವಾಗಿ ಹೇಳಿದ್ದೇನೆ. ಆದರೆ, ಅವರು ಕ್ರಮ ಕೈಗೊಂಡಿಲ್ಲ, ಈ ಕುರಿತು ಎಸ್‌ಪಿ ಅವರಿಗೂ ಪತ್ರ ಬರೆಯಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಸುಧೀರ ಸಾಹುಕಾರ ತಹಸೀಲ್ದಾರ್ ನವಲಗುಂದ


"

ಕೆಲ ವರ್ಷಗಳ ಹಿಂದೆ ಪೊಲೀಸ್ ಠಾಣೆ ಅದೇ ಜಾಗದಲ್ಲಿತ್ತು. ಹೀಗಾಗಿ, ಮೊದಲಿನಿಂದಲೂ ಅಲ್ಲಿ ವಾಹನಗಳನ್ನು ನಿಲ್ಲಿಸುತ್ತ ಬಂದಿದ್ದೇವೆ. ನಮ್ಮ ಇಲಾಖೆಗೆ ಸುರಕ್ಷಿತವಾದ ಬೇರೆ ಜಾಗವಿಲ್ಲ. ಕೋರ್ಟ್‌ಗಳಿಂದ ಬಿಡುಗಡೆಗೊಂಡ ವಾಹನಗಳನ್ನು ಶೀಘ್ರವಾಗಿ ಹೊರ ಹಾಕಲಾಗುವುದು. ಇನ್ಮುಂದೆ ಕಂದಾಯ ಇಲಾಖೆಗೆ ಯಾವುದೇ ರೀತಿಯಿಂದ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ರವಿಕುಮಾರ ಕಪ್ಪತನವರ ನವಲಗುಂದ ಸಿಪಿಐ